ಒಂದಾನೊಂದು ಊರಲ್ಲಿ ಅಕ್ಕ ತಮ್ಮ ಇದ್ದರು. ಅಕ್ಕನ ಗಂಡ ತೀರಿಕೊಂಡಿದ್ದನು. ಆಕೆಗೊಂದು ಹೆಣ್ಣು ಮಗು ಇತ್ತು. ತಾಯಿತಂದೆಗಳು ತಮ್ಮನು ಚಿಕ್ಕವನಿರುವಾಗಲೇ ದೇಹವಿಟ್ಟಿದ್ದರು. ಅವನಿಗೆ ಅಕ್ಕನೇ ಹತ್ತಗಡೆಯವಳು. ಹೀಗೆ ದಿನ ಕಳೆಯುವಷ್ಟರಲ್ಲಿ ಅಕ್ಕನೂ ಅಗಲಿ ಹೋದಳು. ಚಿಕ್ಕವಳಾದ ಅಕ್ಕನ ಮಗಳನ್ನು ತಮ್ಮನು ಜೋಪಾನಮಾಡುವುದು ಅನಿವಾರ್ಯವಾಯಿತು.
ಸೋದರಸೊಸೆಯು ಆರೆಂಟು ವರುಷಗಳಲ್ಲಿ ದೊಡ್ಡವಳಾಗಲು ಅವಳನ್ನು ತಾನೇ ಲಗ್ನವಾದನು. ಅಂದಿನಿಂದ ಅವರು ಗಂಡಹೆಂಡಿರಾಗಿ ಸಂತೋಷದಿಂದ ಇರತೊಡಗಿದರು. ಚೆಲುವೆಯಾದ ಹೆಂಡತಿಯು ಮನೆಯಲ್ಲಿಯೇ ಉಳಿದುಕೊಂಡು ತನ್ನ ಕೆಲಸದಲ್ಲಿಯೇ ತೊಡಗುವಳು. ಆದರೂ ನೆರೆಮನೆಯ ಕಾಮಣ್ಣನೊಬ್ಬನು ಆಕೆಯನ್ನು ಕದ್ದುಗಣ್ಣಿನಿಂದ ಎಂದೋ ನೋಡಿ ಚಂಚಲಚಿತ್ತನಾದನು. ಏನಾದರೂ ನೆವ ಮುಂದೆ ಮಾಡಿಕೊಂಡು ಆ ಚೆಲುವೆಯನ್ನು ಹೊಂಚುಹಾಕಿದನು. ಆಕೆಯ ಗಂಡನು ಮನೆಯಲ್ಲಿಲ್ಲದ ಸಂಧಿಸಾಧಿಸಿ ಬೆಲೆಯುಳ್ಳ ಒಂದು ಸೀರೆಯನ್ನು ಬಗಲಲ್ಲಿ ಹಿಡಿದುಕೊಂಡು ಅವರ ಮನೆಯನ್ನು ಪ್ರವೇಶಿಸಿದನು. ಆದರೆ ಆಕೆಯನ್ನು ಮಾತನಾಡಿಸಲು ಧೈರ್ಯವಾಗದೆ, ಆಕೆಯ ಗಂಡನು ಬಂದುಗಿಂದರೆ ತನ್ನ ಗತಿಯೇನೆಂದು ಹೆದರಿ, ತಾನು ತಂದ ಸೀರೆಯನ್ನು ನಿಲುವುಗಣೆಯ ಮೇಲೆ ಹಾಕಿ ಅಲ್ಲಿಂದ ಕಾಲು ಕಿತ್ತಿದನು.
ಗಂಡನು ಮನೆಗೆ ಬರುವುದೇ ತಡ, ಮೊದಲು ನಿಲವುಗಣೆಯ ಮೇಲಿನ ಸೀರೆ ಆತನ ಕಣ್ಣಿಗೆ ಬಿತ್ತು. ಹೆಂಡತಿಯನ್ನು ಕರೆದು ಕೇಳಿದನು—"ಇದೆಲ್ಲಿಯ ಸೀರೆ?"
"ನನ್ನಕ್ಕ ಕಳಿಸಿದ ಸೀರೆ" ಎಂದಳು.
"ನನಗೆ ಗೊತ್ತಿಲ್ಲದ ಅಕ್ಕನಿನಗಾರಿದ್ದಾಳೆ?" ಎಂದು ಅನುಮಾನ ತೋರಿದನು ಗಂಡ.