"ಒಡಹುಟ್ಟಿದ ಅಕ್ಕನಲ್ಲವಾದರೂ ನಡೆಪಥದ ಅಕ್ಕ ಇದ್ದಾಳೆ ದೂರಿನ ಊರಲ್ಲಿ"
ಅದೇ ಅನುಮಾನದಲ್ಲಿ ಗಂಡ ಕೇಳಿದನು — "ಆಕೆಯನ್ನು ನನಗೆ ತೋರಿಸುವಿಯಾ?"
"ಆಕೆಯ ಊರಿಗೆ ನಾಳೆಯೇ ಹೊರಡೋಣ" ಎ೦ದು ಎಲ್ಲಿಲ್ಲದ ದೈರ್ಯದಿಂದ ಹೆಂಡತಿ ಹೇಳಲು ಗಂಡನು ಪ್ರಯಾಣಕ್ಕೆ ಅಣಿಗೊಳಿಸಿದನು.
ಹೆಂಡತಿ ದಾರಿಯ ರೊಟ್ಟಿಬುತ್ತಿ ಮಾಡಿಟ್ಟಳು. ಗಂಡನು ಒಂದು ಬಾಡಿಗೆಯ ಕುದುರೆ ತಂದನು. ಬೆಳಗಾಗುವ ಮೊದಲು ಗಂಡಹೆಂಡರು ಹೊರಟುಬಿಟ್ಟರು. ಸರತಿಯಿಂದ ಕುದುರೆ ಹತ್ತುತ್ತ ಸಾಗಿದ್ದರಿ೦ದ ಮಧ್ಯಾಹ್ನವಾಗುತ್ತ ಬಂದರೂ ಅವರಿಗೆ ದಣಿವಾಗಲಿಲ್ಲ. ಇನ್ನೇನು, ನೀರು-ನೆರಳು ನೋಡಿ ಊಟ ತೀರಿಸಬೇಕೆಂದು ದಾರಿಯ ಬದಿಯಲ್ಲಿರುವ ಒಂದು ತೋಟವನ್ನು ಕಂಡು ಅಲ್ಲಿಳಿದರು.
ತೋಟಕ್ಕೊಂದು ಬಾವಿಯಿತ್ತು. ಆದರೆ ಅದೆಷ್ಟು ಆಳವಾಗಿ ಅಗೆಸಿದರೂ ಬಾವಿಗೆ ನೀರೇ ಬಿದ್ದಿಲ್ಲವೆಂದು ತಿಳಿಯಿತು. ಏನಿದ್ದರೂ ದಾರಿಕಾರರು ಉಂಡು ನೀರು ಕುಡಿದು ತಣಿಯಲಿಕ್ಕೆ ಯಾವ ತೊಂದರೆಯೂ ಇರಲಿಲ್ಲ. ಗಂಡನಾದವನು ತಂಬಿಗೆ ತೆಗೆದುಕೊಂಡು ಕೈಕಾಲಿಗೆ ಹೋದನು. ಹೆಂಡತಿ ಜಾವಿಯ ಬಳಿಗೆ ಹೋಗಿ ನಾಲ್ಕು ಮೆಟ್ಟುಗಲ್ಲುಗಳನ್ನಿಳಿದು ಬಾಗಿನಿ೦ತು ನೀರು ನೋಡಿದಳು. ಆಕೆಯ ದೃಷ್ಟಿಬಿದ್ದ ಮುಕ್ಕು ನೀರೇ ಅದೇ ನಿಮಿಷದಿಂದ ಏರತೊಡಗಿ ಕ್ಷಣಾರ್ಧದಲ್ಲಿ ಮೆಟ್ಟುಗಟ್ಟೆಯನ್ನು ಮುಳುಗಿಸಿಬಿಟ್ಟಿತು. ಅದನ್ನು ಕಂಡು ಅಲ್ಲಿಯೇ ಬಾವಿಯ ಮೇಲೆ ಆಡುತ್ತ ಕುಳಿತ ಇಬ್ಬರು ಬಾಲಕರು, ಬಾವಿಗೆ ನೀರು ಬಂದ ಸಂತೋಷದ ಸುದ್ದಿಯನ್ನು ಹೇಳುವುದಕ್ಕೆ ಮನೆಗೆ ಓಡಿದರು.
ಒ೦ದರ್ಧಗಳಿಗೆ ಕಳೆಯುವಷ್ಟರಲ್ಲಿ ಮನೆಯೊಡತಿ ಹಿರಿಹಿರಿಹಿಗ್ಗಿನಿಂದ ಗಾಡಿ ಹೂಡಿಸಿಕೊಂಡು ತನ್ನಿಬ್ಬರು ಮಕ್ಕಳೊಡನೆ ತೋಟಕ್ಕೆ ಬಂದೇಬಿಟ್ಟಳು, ಅವರು ಪರಸ್ಪರ ಪರಿಚಯದವರೂ ಅಲ್ಲ. ಒಬ್ಬರನ್ನೊಬ್ಬರು ಕಂಡಿದ್ದು ಸಹ ಅಂದೇ. ಆದರೆ ಆ ಹೆಣ್ಣುಮಗಳ ಕಾಲ್ಗುಣದಿಂದ ತಮ್ಮ ತೋಟದ ಬಾವಿಗೆ ನೀರು ಬಂದವೆಂಬ ಅತಿಹರ್ಷದಿಂದ ತೋಟದೊಡತಿ ಗಾಡಿಯಿಂದ ಇಳಿದವಳೇ "ತಂಗೀ, ಯಾವಾಗ ಬಂದಿರಿ” ಎಂದು ಅಪ್ಪಿಕೊಂಡಳು.
"ಅಕ್ಕ! ಹಾಲು ಹರಿದಂತೆ ಒಗೆತನ ಹರಿದುಹೊರಟಿದೆ? ಎಂದಳೀಕೆ.
"ಕಳಿಸಿದ ಗಳಿಗೆ ಜೋಕೆಯಾಗಿದೆಯೋ?” ಎ೦ದಳಾ ಅಕ್ಕ.