ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯಾಶೆ

ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರಿಸಬೇಕಾಯಿತು.

ಸೌಮ್ಯವಾದ ಔಷಧಿ-ಚಿಕಿತ್ಸೆಗಳಿಗೆ ಹಣಿಯದೆ ಕಾಯಿಲೆಯು ದಿನದಿನಕ್ಕೆ ಅಸಾಧ್ಯವಾಗುತ್ತಲೇ ಬಂದಿತು. ಯಜಮಾನನು ಬಿದ್ದಲ್ಲಿಯೇ ಬಿದ್ದುಕೊಳ್ಳುವ ಸ್ಥಿತಿಯು ಪ್ರಾಪ್ತವಾಯಿತು. ಮಾತನಾಡುವುದಕ್ಕೆ ತ್ರಾಣವಿಲ್ಲದಂತಾಯಿತು. ಕೊನೆಗೆ ಮಾತೂ ನಿಂತುಹೋದವು. ಸನ್ನೆಯಿಂದಲೇ ಹೇಳಲು ಕೇಳಲು ತೊಡಗಿದರು.

ತಂದೆಯ ದುರವಸ್ಥೆ ಕಂಡು, ಮಕ್ಕಳೆಲ್ಲ ಸುತ್ತಲು ನೆರೆದು ಕುಳಿತು "ನನಗೇನು ಹೇಳುತ್ತೀ" ಎಂದು ಕಣ್ಣೀರು ಸುರಿಸತೊಡಗಿದರು. ತಂದೆಗೆ ಮಾತಾಡಲು ಸಾಧ್ಯವಿರದಿದ್ದರೂ ಸ್ಮೃತಿಯಿತ್ತು. ಆದ್ದರಿಂದ ಕೈಸನ್ನೆಯಿಂದಲೇ ಅವರಿಗೆ ಸಾಂತ್ವನ ಹೇಳಿದನು. ಮರುಕ್ಷಣದಿಂದಲೇ ಬೆರಳಿನಿಂದ ಸೂಚಿಸುತ್ತ ಏನೋ ತೋರಿಸಹತ್ತಿದನು. ಮಕ್ಕಳಿಗೆ ಅನುಮಾನವಾಯಿತು "ಹುಗಿದಿಟ್ಟ ದ್ರವ್ಯವನ್ನೇ ತೋರಿಸುತ್ತಾನೋ ಏನೋ?" ಎಂದು. ತಂದೆಯ ಅಭಿಪ್ರಾಯವನ್ನು ಸರಿಯಾಗಿ ತಿಳಕೊಳ್ಳುವ ಆಸೆಯುಂಟಾಯಿತು ಅವರಿಗೆ ಅದಕ್ಕೇನು ಮಾಡುವುದು? ಅದೆಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ. ಒಂದು ಕ್ಷಣದ ಮಟ್ಟಿಗಾದರೂ ಆತನು ಎದ್ದು ಕುಳಿತು ಮಾತಾಡುವಷ್ಟು ಪ್ರಾಣಬರುವಂತೆ ಉಪಾಯ ಮಾಡಲೇಬೇಕೆಂದು ಯೋಚಿಸಿ, ಬಲ್ಲವರ ಬಳಿಗೆ ಓಡಿಹೋಗಿ ಕೇಳಿಕೊಂಡರು.

ನೂರಿನ್ನೂರು ರೂಪಾಯಿ ಖರ್ಚುಮಾಡಿ, ವೈದ್ಯರ ಬಳಿಯಲ್ಲಿರುವ ಒಂದು ಮಾತ್ರೆಯನ್ನು ತಂದು, ತೇದು, ಆಸನ್ನ ಮರಣನಾದ ತಂದೆಯ ನಾಲಗೆಗೆ ಸವರಿದರು. ಅದರ ಪರಿಣಾಮವಾಗಿ ರೋಗಿಯು ಚೇತರಿಸಿಕೊಂಡು ಎದ್ದು ಕುಳಿತನು. ಅಲಕ್ಕನೇ ಸ್ಮರಣಶಕ್ತಿ ಸುಳಿದು ಬಂದಿತು. ಬಾಯಿಗೆ ಮಾತು ಬಂದವು. ಮಕ್ಕಳು ಹಿಗ್ಗಿ ತಂದೆಗೆ ಕೇಳಿದರು "ಆಗಲೇ ಕೈಮಾಡಿ ಏನೋ ಸೂಚಿಸುತ್ತಿದ್ದೆಯಲ್ಲ! ಏನು ಹೇಳಬೇಕೆಂದು ಮಾಡಿದ್ದೀ."