ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಸ್ತವಿಕ ಕಥೆಗಳು

೧೦೫

ತಾಯಿ ಹೇಳುತ್ತಾಳೆ—"ಮೊನ್ನೆ ಬಂದಿದ್ದಳಪ್ಪ ಸೇರು ಜೋಳ ಬೇಡಿದಳು."

"ಸೇರು ಜೋಳ ಬೇಡಿದರೆ ಹೇರುಜೋಳ ಕೊಡಬೇಕಾಗಿತ್ತು ತಂಗಿಗೆ. ಮಕ್ಕಳ ಗಿತ್ತಿ, ಬಡವಿ, ಕೊಡಲಿಲ್ಲವೇಕೆ?" ಎಂದವನೇ ಎತ್ತಿನಮೇಲೆ ಹೇರುಜೋಳ ತೆಗೆದುಕೊಂಡು ತಂಗಿಯ ಊರಿಗೆ ಹೊರಟನು.

ಊರಮುಂದಿನ ಬಾವಿಗೆ ನೀರಿಗಾಗಿ ಬಂದ ಹೆಣ್ಣು ಮಕ್ಕಳನ್ನು ಕುರಿತು - "ಅವ್ವಗಳಿರಾ, ನಮ್ಮ ತಂಗೆಮ್ಮ ಚೆನ್ನಾಗಿರುವಳೇ" ಎಂದು ಕೇಳಲು, "ಆಕೆಯ ಸುದ್ದಿ ಕೇಳಿಲ್ಲ. ಆಕೆಯಮನೆಗೂ ಹೋಗಿಲ್ಲಪ್ಪ" ಎಂಬ ಉತ್ತರ ಬಂದಿತು. ಎತ್ತು ಹೊಡಕೊಂಡು ನೇರವಾಗಿ ತಂಗಿಯಮನೆಗೆ ಹೋದನು.

ಇದೇನು? ಹೊತ್ತು ಹೊರಟು ಇಷ್ಟು ಹೊತ್ತಾದರೂ ತಂಗಿಯ ಸುಳಿವೇ ತೋರಲಿಲ್ಲ. ಬೆಳಗಾಗಿ ಇಷ್ಟು ಹೊತ್ತಾದರೂ ಬೀಗನ ಸುಳಿವೇ ಕಾಣಲಿಲ್ಲ. ಬಿಸಿಲು ಬಿದ್ದು ಇಷ್ಟು ಹೊತ್ತಾದರೂ ಮಕ್ಕಳ ಉಲಿವೇ ಕಂಡುಬರಲಿಲ್ಲ. ಸಂಶಯವೇ ಬಂತು. ಮುಚ್ಚಿದ ಬಾಗಿಲು ತೆರೆದುನೋಡಿದರೆ ಹತ್ತುಹೆಣ ಮಲಗಿವೆ ಸಾಲಾಗಿ! ಅದನ್ನು ಕಂಡ ತಂಗೆಮ್ಮನ ಅಣ್ಣನು, ಹತ್ತಿರಕೂಡ ಹನ್ನೊಂದಾಗಲೆಂದು ಹೊಟ್ಟೆಯಲ್ಲಿ ಚೂರಿತಿವಿದುಕೊಂಡು ಸತ್ತುಬಿದ್ದನು.

ಮುಂದಿನ ಕೆಲಸ ಏನುಳಿಯಿತಿನ್ನು? ಅಂತ್ಯವಿಧಿ ಒಂದೇ. ನೀಲವ್ವ ನಿಂಬೆವ್ವರನ್ನು ನಿಂಬೆಯ ಬನದಲ್ಲಿ, ಗಂಗವ್ವ—ಗೌರವ್ವರನ್ನು ಬಾಳೆಯ ಬನದಲ್ಲಿ ಇಟ್ಟರು. ತೆಂಗಿನ ಬನದಲ್ಲಿ ರಾಮಲಕ್ಷ್ಮಣರನ್ನು, ಪೇರಲಬನದಲ್ಲಿ ಭೀಮಕಾಮರನ್ನು ಇಟ್ಟರು. ಗಂಡಹೆಂಡಿರನ್ನು ಶಿವನ ಪಾದದಲ್ಲಿ ಹಾಗೂ ಅಕ್ಕರೆಯ ಅಣ್ಣನನ್ನು ತಂಗಿಯ ಪಾದದಲ್ಲಿ ಇಟ್ಟರು.

ಹೊಟ್ಟೆಗಿಲ್ಲವೆಂದು ವಿಷ ತಿಂದು ಸತ್ತರೂ ಹಿಂದಿನವರು ಅವರ ಹೆಣಗಳನ್ನೆಲ್ಲ ಒಂದೊಂದು ಬನದಲ್ಲಿ ಹುಗಿದು ತಣಿಸಿದರು. ಹೆಚ್ಚಿನ ಸಹಾನುಭೂತಿ ಏನು ಬೇಕು?

 •