ಸೇವಕನ ಸಂಬಳವೇಕೆ ಕಡಿಮೆ?
ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು—"ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸೆ ಬೊಗಸೆ. ತನ್ನ ಕೆಲಸ ಓಡಾಟದ್ದು, ಪ್ರಧಾನಿಯದು ಸ್ವಸ್ಥ ಕುಳಿತುಕೊಳ್ಳುವುದು. ಈ ಭೇದಭಾವವೇಕೆ?"
ರಾಜನನ್ನು ಕೇಳಿಯೇಬಿಟ್ಟನು ಸೇವಕನು—"ಹಗುರು ಕೆಲಸಮಾಡುವ ಪ್ರಧಾನಿಯ ಸಂಬಳ ಲೆಕ್ಕ ತಪ್ಪಿ; ಶ್ರಮದ ಕೆಲಸಮಾಡುವ ನನ್ನ ಸಂಬಳ ಹತ್ತೆಂಟು ಟಿಗಳಿ. ಹೀಗೇಕೆ?"
"ನಿನ್ನ ಕೆಲಸ ಶ್ರಮದ್ದು. ಪ್ರಧಾನಿಯ ಕೆಲಸ ಹಗುರು. ಆದರೂ ಅಷ್ಟು ಸಂಬಳ ಅವನಿಗೆ ಕೊಡಲೇಬೇಕಾಗುತ್ತದೆ. ಶ್ರಮದ ಕೆಲಸವಾದರೂ ನಿನ್ನ ಸಂಬಳ ಕಡಿಮೆ ಅಲ್ಲ. ಆದರೂ ನಿನಗೆ ಅಸಮಾಧಾನವೆನಿಸುತ್ತಿದ್ದರೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಿಗೆ ಕೊಡಿಸುತ್ತೇನೆ. ಆಯಿತೇ" ಎಂದನು ರಾಜ.
ಸೇವಕನ ತಲೆಯೊಳಗಿನ ಗುಂಗೇ ಇಳಿಯಲೊಲ್ಲದು. ಅಷ್ಟು ದೊಡ್ಡ ಸಂಬಳ ಪ್ರಧಾನಿಗೇಕೆ?
ರಾಜನು ಒಂದು ದಿನ ಬೇಟೆಗೆ ಹೊರಟನು. ಜೊತೆಗೆ ಪ್ರಧಾನಿ ಹಾಗೂ ಸೇವಕ ಇರತಕ್ಕವರೇ, ಬೇಟೆಯನ್ನರಸುತ್ತ ಹೋದೇ ಹೋದರು. ಒಂದು ಹೊಳೆ ಕಾಣಿಸಿತು. ಕೈಕಾಲು ತೊಳಕೊಂಡು ಹೊಳೆಯ ದಂಡೆಯಲ್ಲಿರುವ ಒಂದು ಮರದ ನೆರಳಿಗೆ ಕುಳಿತು ಕೊಂಡರು.
ಹೊಳೆಯ ಆಚೆಯಲ್ಲಿ ಜನರ ಗುಂಪು ಕೂಡಿದಂತೆ ಕಾಣಿಸಲು, ರಾಜನಲ್ಲಿ ಕುತೂಹಲ ಹುಟ್ಟಿತು. ಸೇವಕನಿಗೆ ಹೇಳಿದನು "ಆಚೆಯ ದಡಕ್ಕೆ ಹೋಗಿ ಅವರಾರು, ತಿಳಕೊಂಡು ಬಾ."
ಸೇವಕನು ಹೊಳೆದಾಟಿ ಆಚೆಯ ತೀರವನ್ನು ಸೇರಿ, ಆ ಜನರ ಗುಂಪಿನ ಬಳಿ ಹೋಗಿ ಮಾತನಾಡಿಸಿ ಬಂದು ರಾಜನಿಗೆ ಹೇಳಿದನು "ಅವರು ವೇಷಗಾರರಂತೆ."