ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬುದ್ಧಿವಂತಿಕೆಯ ಕಥೆಗಳು
೧೨೧

"ಅವರ ಊರು ಯಾವುದಂತೆ?" ರಾಜ ಕೇಳಿದನು.

"ಅದನ್ನು ಕೇಳಲಿಲ್ಲ ದೊರೆಗಳೇ, ಓಡುತ್ತ ಹೋಗಿ ಕೇಳಿಕೊಂಡು ಬರುವೆ"

ಎಂದವನೇ ಅತ್ತ ಓಡಿದನು ಸೇವಕ. ಮರಳಿ ಬಂದ ರಾಜನಿಗೆ ತಿಳಿಸಿದನು "ಅವರು ಶ್ರೀಶೈಲ ಕಡೆಯವರಂತೆ."

"ಹೀಗೋ? ಇಲ್ಲಿ ಇನ್ನೂ ಎಷ್ಟು ದಿವಸ ಇರುವರಂತೆ?" ರಾಜನ ಪ್ರಶ್ನೆ. ಅದನ್ನು ಕೇಳುವುದಕ್ಕೆ ಸೇವಕನು ಮತ್ತೆ ಹೊಳೆದಾಟಿದನು. ಇನ್ನೂ ನಾಲ್ಕಾರುದಿನ ಇಲ್ಲಿಯೇ ಇರುವರೆಂಬ ಸಮಾಚಾರ ತಂದನು.

"ನಮ್ಮ ಊರಿಗೆ ಬರುವರೇ?" ಮತ್ತೊಂದು ಪ್ರಶ್ನೆ ರಾಜನದು. ಅದನ್ನು ತಿಳಿಯಲು ಸೇವಕನು ಹೋಗಿ ಬಂದನು. "ರಾಜನ ಅಪ್ಪಣೆಯಾದರೆ ಬರುವರಂತೆ"

ಎಂದು ಸೇವಕನು ಬಿನ್ನಯಿಸಿದನು.

"ಅವರು ಯಾವ ಸೋಗು ಹಾಕುತ್ತಾರೆ? ಅವರು ಅಪೇಕ್ಷಿಸುವ ಪ್ರತಿಫಲ ಎಂಥದು? ನಮ್ಮ ರಾಜಧಾನಿಯಲ್ಲಿಯೇ ಅವರು ನೆಲಸಬೇಕಾದರೆ ನಾವು ಯಾವ ಸೌಕರ್ಯ ಒದಗಿಸಬೇಕು?"—ಮೊದಲಾದ ಸಂಗತಿಗಳನ್ನು ತಿಳಕೊಳ್ಳುವ ಸಲುವಾಗಿ ಸೇವಕನು ಹಲವು ಸಾರೆ ಓಡಾಡಬೇಕಾಯಿತು. ಆತನು ದಣಿದುಹೋದನೇ ಹೊರತು ರಾಜನಿಗೆ ಬೇಕಾದ ಸಂಪೂರ್ಣ ಮಾಹಿತಿ ತರಲಿಲ್ಲ.

ಪ್ರಧಾನಿಯನ್ನು ಕರೆಯಿಸಿ ರಾಜನು ಹೇಳಿದನು "ಹೊಳೆಯಾಚೆಗೆ ಕಾಣಿಸುವ ಗುಂಪು ಏತಕ್ಕಾಗಿ ನೆರೆದಿದೆ? ಅವರಾರು? ಅವರ ಉದ್ದೇಶವೇನು, ತಿಳಕೊಂಡು ಬರಬೇಕು."

"ಆಗಲಿ ದೊರೆಗಳೇ" ಎಂದು ವಂದಿಸಿ ಪ್ರಧಾನಿಯು ಹೊಳೆಯಾಚೆಗಿನ ತೀರಕ್ಕೆ ತೆರಳಿದನು. ಒಂದೆರಡು ಗಳಿಗೆಯಲ್ಲಿ ಬಂದು ತಾನು ತಂದ ಸಮಾಚಾರವನ್ನೆಲ್ಲ ರಾಜನಿಗೆ ಬಿನ್ನಯಿಸಿದನು "ಅವರು ಶ್ರೀಶೈಲಕಡೆಯವರು. ವೇಷಗಾರರು. ಹೆಣ್ಣು ಗಂಡು ಕೂಡಿ ಹನ್ನೊಂದು ಜನರಿದ್ದಾರೆ. ಈ ಊರಲ್ಲಿ ನಾಲ್ಕಾರು ದಿನವಿದ್ದು ಮುಂದಿನೂರಿಗೆ ಹೊರಡುವದರಲ್ಲಿದ್ದರು. ನಮ್ಮೂರಿಗೆ ಬರಲು ತಿಳಿಸಿದ್ದೇನೆ. ದಶಾವತಾರಗಳ ಸೋಗು ಹಾಕುವರಂತೆ. ನಾಲ್ಕು ಕೂರಿಗೆ ಹೊಲ, ಹನ್ನೆರಡು ಅಂಕಣದ ಮನೆ ಕೊಟ್ಟರೆ, ನಮ್ಮೂರವರಾಗಿಯೇ ಉಳಿಯುತ್ತೇವೆಂದು ಹೇಳಿದರು. ಅಪ್ಪಣೆಯಾದರೆ ಈಗಲೇ ಬಂದು ದೊರೆಗಳನ್ನು ಕಾಣುವರಂತೆ.