ಮನೆ ಅಳಿಯ
ಅಳಿಯನಿಗೆ ಮನೆಯಳಿಯ ಮಾಡಿಕೊಂಡಿದ್ದರು; ಮಗಳಿಗೆ ಮನೆಯಾಗೇ ಇಟ್ಟುಕೊಂಡಿದ್ದರು. ಅಳಿಯ ದನಕರುಗಳನ್ನು ಕಾಯಬೇಕು. ಮನೆಯಲ್ಲಿ ತಂಗುಳಬಂಗುಳ ಉಣ್ಣಬೇಕು—ಈ ರೀತಿ ವ್ಯವಸ್ಥೆಮಾಡಿದ್ದರು. ಅಳಿಯನೆಂದರೆ ದನಕಾಯುವ ಹುಡುಗ ಅಂತ ನಿಷ್ಕಾಳಜಿ ಮಾಡುತ್ತಿದ್ದರು.
"ನನ್ನ ಹಣೇಬರಹದಾಗ ಇಷ್ಟೇ ಬರೆದಾದ. ಅದಕ್ಕಾಕ ಚಿಂತಿ ಮಾಡಬೇಕು" ಎಂದು ವಿಚಾರಮಾಡಿ ದಿನಾಲು ಕೆಲಸಮಾಡುತ್ತ ಇದ್ದನು. ಒಂದುದಿನ ಹೊಲದಾಗ ಎತ್ತುಬಿಟ್ಟಿದ್ದ. ಧಾರೆ ಮಳೆ ಸುರೀಲಿಕ್ಕ ಹತ್ತಿತು. ಆ ಸಮಯದಾಗ ನೀರಿನ ಬಿಂದಿಗೆಯೊಳಗಿನ ನೀರೆಲ್ಲ ಚೆಲ್ಲಿ ಅದರಲ್ಲಿ ಅಂಗಿ, ಧೋತರ ತುರುಕಿದನು. ತಾನು ಬರಿಯ ಚಡ್ಡಿಯಮೇಲೆ ನಿಂತನು. ಬಿಂದಿಗೆ ಬೋರಲು ಹಾಕಿದ. ಹಾಂಗೇ ತಾಸು ಗಟ್ಟಲೆ ನಿಂತನು. ಮಳೆ ಹೊಡೆದು ಹೊಡೆದು ಬಹಳ ಹೊತ್ತಿನ ಮೇಲೆ ನಿಂತು ಬಿಟ್ಟಿತು. ಛಕ್ಕನೆ ಬಿಸಿಲುಬಿತ್ತು. ಉಟ್ಟುಕೊಂಡು ತೊಟ್ಟುಕೊಂಡು ನಿಂತನು. ಅಲ್ಲಿಗೆ ಒಬ್ಬ ಗೋಸಾವಿ ಮೈತೋಯಿಸಿಕೊಂಡು ಬಂದನು. "ನಾನು ಇಷ್ಟು ತೋಯಿಸಿಕೊಂಡೀನು. ಈ ಮನುಷ್ಯ ಏನೂ ತೋಯಿಸಿಕೊಂಡಿಲ್ಲ. ಇದರಾಗೇನಿದೆ ಚಮತ್ಕಾರ" ಎಂದುಕೊಂಡನು. "ಯಾಕಪ್ಪ ನಿನ್ನ ಮೈಮ್ಯಾಗ ಮಳೆ ಬಿದ್ದಿಲ್ಲೇನು" ಎಂದು ಕೇಳಿದನು.
"ನಂದು ನನಗೇ ಗೊತ್ತು. ನಿಂದು ನಿನಗೇ ಗೊತ್ತು. ನನಗ ಇದರ ಅರ್ಥಹೇಳು ಅಂದರೆ, ನಿನ್ನ ಹಂತ್ಯಾಕಿದ್ದ ಮಂತ್ರ ತಂತ್ರ ಹೇಳಿದರ ನಾ ನನ್ನ ಹಿಕಮತಿ ಹೇಳತೀನಿ" ಎಂದು ನುಡಿದನು ಅಳಿಯ.
ತನ್ನ ಪರಿಸ್ಥಿತಿಯನ್ನೆಲ್ಲ ಅಳಿಯ ಹೇಳಿದನು. "ಹೊತ್ತರಳಿ ದನಕಾಯಲು ಅತ್ತೆ ಮಾವ ಕಳಿಸತಾರ. ಅತ್ತಿ ಮಾವ ಹೇಣತಿ ಯಾರೂ ಸೇರೂದಿಲ್ಲ. ಈ ಪರಿಸ್ಥಿತಿ ಹೋಗೂ ಸಲುವಾಗಿ ಒಂದು ಉಪಾಯ ಹೇಳು" ಎಂದು ಗೋಸಾವಿಗೆ ಕೇಳಿಕೊಂಡನು. ಗೋಸಾವಿ ಅಲ್ಲೇಬಿದ್ದ ಏಳು ಹರಳು ಆರಿಸಿಕೊಂಡನು.
"ಒಂದು ಹರಳು ಒಗೆದು ಅಲ್ಲೇ ಚಿಟಕಾಸಿ ಕೂಡು, ಅಂದರ ಅಲ್ಲೇ ನೆಲಕ್ಕೆ ಹತ್ತಂಡಿ ಆಗಿ ಚಿಟಕಾಸಿಕೊಂಡು ಬಿಡತಾದ. ಅತ್ತೆ ಮಾವ ಮಲಕೊಂಡ