ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪
ಜನಪದ ಕಥೆಗಳು

ಜಾಗಾದಿಂದ ಏಳಬಾರದು — ಎರಡು ಹರಳು ಒಗೆದರೆ — ಯಾರೂ ಅವರೀಗಿ ಎಬ್ಬಿಸಲಿಕ್ಕೆ ಸಾಧ್ಯವಿಲ್ಲ. ಹೀಂಗ ಏಳು ಹರಳು ಉಪಯೋಗಿಸುವುದರಾಗ ಅತ್ತಿ ಮಾವ ಹಾದೀ ಮ್ಯಾಲ ಬರತಾರೆ" ಎಂದು ಹೇಳಿ, ಅಳಿಯನ ಹಿಕಮತ್ತಿಯ ಬಗ್ಗೆ ಕೇಳುತ್ತಾನೆ.

"ಗುಂಡರಗಿಯೊಳಗೆ ಅರಿವೆ ತುರುಕಿ ಬಿಂದಿಗೆ ಬೋರಲ ಹಾಕಿದ್ದರಿಂದ ಮಳಿ ಹತ್ತಲಿಲ್ಲ."

ಅಳಿಯ ಮನೆಗೆ ಬಂದು ಬಂಕಿನಲ್ಲಿ ಮಲಗಿಕೊಂಡನು. ಬಾಗಿಲಲ್ಲಿ ಬಂದು ಅತ್ತೆ ಮಾವ ಮಲಗಿದಲ್ಲಿ ಮಲಗಲಿ ಎಂದು ಸೈ ಎಂದನು. ಬಾಗಿಲಿಗೆ ಬಂದು ಬಾಗಿಲು ತೆರೆಯಿರಿ ಅನ್ನುತ್ತಾನೆ. ಅವರು ನೆಲಕ್ಕೆ ಮೆತ್ತಿಕೊಂಡವರು ಮೇಲೆ ಏಳಲೊಲ್ಲರಾದರು. "ತೊರೆಯ ಆಚೆಗೆ ಜಾಣಿಹಾಳ, ಅವಳೀಗಿ ಕೇಳಿ ಬರಿ" ಎಂದು ಮಂದೀಗಿ ಕಳಿಸ್ತಾರ. ಜಾಣಿ ನಡುನೀರೊಳಗಿಂದ ಹಾಯ್ದು ಬರುವಾಗ ಇಂವ ನಿಂತಲ್ಲಿ — ನಿಂತು — ನೀರಾಗ ನಿಂತಕ್ಕಿ ನಿಂತಾಂಗೇ ಇರಲಿ ಎಂದು ಗಟ್ಟಿಯಾಗಿ ಹೇಳುತ್ತಲೇ ಹರಳ ಒಗೆಯುತ್ತಾನೆ.

ಜಾಣಿ ಇವನಿಗೆ ಅಂಗಲಾಚಿ ಬೇಡುತ್ತಾಳೆ — "ನನಗೆ ಬಿಡುಗಡೆ ಮಾಡಿದರೆ ನಿನಗ ಬೇಡಿದ್ದು ಕೊಡುತ್ತೀನಿ."

ನಡೆ ಅಂದಕೂಡಲೇ ನೀರೊಳಗಿಂದ ಜಾಣಿ ಪಾರಾಗಿ ಮುಂದೆ ಮುಂದೆ ಬಂದಳು. ಬಂದು ಅತ್ತೆ ಮಾವಂದಿರಿಗೆ ಬುದ್ಧಿ ಹೇಳಿದಳು "ನಿಮ್ಮ ಅಳಿಯನಿಗೆ ಈ ರೀತಿ ಕಾಡಬೇಡಿರಿ. ಇಲ್ಲ ಅಂದರೆ ನೀವು ನೆಲದ ಮ್ಯಾಗಿಂದ ಏಳಲಿಕ್ಕ ಸಾಧ್ಯವೇ ಇಲ್ಲ" ಎಂದು ಗಟ್ಟಿಯಾಗಿ ಹೇಳುತ್ತಾಳೆ.

"ನಾವು ಹಿಂಥಾ ಕೆಲಸ ಇನ್ನೆಂದೂ ಮಾಡೂದಿಲ್ಲ" ಎಂದು ಗಲ್ಲಗಲ್ಲ ಬಡಕೊಳ್ಳುತ್ತಾರೆ. ಏಳಬೇಕೆನ್ನುತ್ತಾರೆ, ಏಳುವದಾಗಲಿಲ್ಲ. ಆಗ ಅಳಿಯ "ನಡೆ" ಅಂದ ಕೂಡಲೇ ಗಪ್ಪನೆ ಎದ್ದು ಕುಳಿತರು.

ಅಂದಿನಿಂದ ಅಳಿಯದೇವರ ಸತ್ಕಾರ ನಡೆಯಲು ಆರಂಭವಾಯಿತು.

 •