ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬುದ್ಧಿವಂತಿಕೆಯ ಕಥೆಗಳು
೧೨೭

ನೆರೆಯ ರಾಜನು ಕೊತವಾಲನ ಮುಖಾಂತರ ಆ ನಾಗರಿಕನನ್ನು ಕರೆಯಿಸಿದನು. ಆತನೇ ನಮ್ಮ ಮಂತ್ರಿಯೆಂದೂ ಅವನೇ ನಾಲ್ಕೂ ಪ್ರಶ್ನೆಗಳಿಗೆ ಈಗ ಉತ್ತರ ಹೇಳುವನೆಂದೂ ರಾಜನು ತಿಳಿಸಿದನು.

ಮಂತ್ರಿಯು ನೆರೆಯರಾಜನಿಗೆ ಆತನ ನಾಲ್ಕು ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ಹೇಳಿದನು (೧) ಒಳ್ಳೆಯದರಲ್ಲಿ ಕೆಟ್ಟದಾವುದು? ಈ ಪ್ರಶ್ನೆಗೆ ಉತ್ತರವೆಂದರೆ ನನ್ನ ಹೆಂಡತಿ ಗೌಪ್ಯಸಂಗತಿಯೆಂದು ತಿಳಿಸಿದ್ದರೂ ಆಕೆ ಕೊತವಾಲನ ಮನೆಯಲ್ಲಿ ಅದನ್ನು ಬಹಿರಂಗಪಡಿಸಿದಳು.

(೨) ಕೆಟ್ಟದರಲ್ಲಿ ಒಳ್ಳೆಯದಾವುದು? ಈ ಪ್ರಶ್ನೆಗೆ ಉತ್ತರ ಆ ಪಾತ್ರದವಳು. ಆಕೆ ಸೂಳೆಯಾಗಿದ್ದರೂ ಋಣಾನುಬಂಧವನ್ನು ನೆನೆದು, ನನ್ನನ್ನು ಬಂಧಮುಕ್ತಗೊಳಿಸಿದಳು.

(೩) ಅಂಗಡಿಯೊಳಗಿನ ನಾಯಿ ಯಾವುದೆಂದರೆ—ಈ ಕೊತವಾಲ. ಈತನಿಗೆ ನಾನು ಪ್ರಾಣಸ್ನೇಹಿತನಾಗಿದ್ದರೂ ಸಂಪೂರ್ಣ ವಿಚಾರಿಸದೆ ನನ್ನನ್ನು ಸೆರೆಯಲ್ಲಿರಿಸಿದನು.

(೪) ಸಿಂಹಾಸನ ಮೇಲಿನ ಕತ್ತೆ ಯಾವುದೆಂದು ಹೇಳಲಿ? ತಾವೇ ದೊರೆಗಳೇ. ರಾಜನ ಮಗ ಕೊಲೆಯೆಂದಕೂಡಲೇ ಕೊಲೆಗಾರನೆಂದು ಶಿಕ್ಷೆ ವಿಧಿಸಿಯೇ ಬಿಟ್ಟಿರಿ. ಯಾವ ರಾಜನ ಮಗನ ಕೊಲೆಯಾದದ್ದು—ಎಂಬುದನ್ನೇನೂ ನೀವು ವಿಚಾರಿಸಲಿಲ್ಲ.

ನೆರೆಯ ರಾಜನು ಉತ್ತರಗಳನ್ನು ಕೇಳಿಕೊಂಡು ಮಂತ್ರಿಯ ಜಾಣತನಕ್ಕೆ ತಲೆದೂಗಿ, ಆತನ ರಾಜನನ್ನು ಧನ್ಯವಾದಗಳೊಡನೆ ಬೀಳ್ಕೊಟ್ಟನು.


 •