ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಟ್ಟಲ್ಯಾತಕ್ಕ ಕೆನಿ ತಿನ್ಸಕ್ಕ

ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕ್ಕೆ ಹೆಂಡತಿ ಸೈ ಎಂದಳು.

ಕೆಂಡದ ಮೇಲಿಟ್ಟು ಹಾಲು ಕಾಸಿದರೆ, ಅಂಗೈಗಡುತರ ಕೆನೆ ಹೊರಡುವದು. ಆದರೆ ಅದನ್ನು ನೋಡಿದರೆ ಹೆಂಡತಿಯ ಜೀವ ಅದನ್ನು ತಿನ್ನುವುದಕ್ಕೆ ಎಳಸುವದು. ಅಲ್ಪಸ್ವಲ್ಪ ತಿಂದರೆ ಸಾಕಾಗುವಂಥವಲ್ಲ ಕೆನೆ. ಅದನ್ನು ಇಡಿಯಾಗಿ ತಿಂದು, ಹಾಲಿಗೆ ಕೆನೆಯೇ ಹೊರಡುವದಿಲ್ಲವೆಂದು ಗಂಡನಿಗೆ ಹೇಳುವಳು. ಎಮ್ಮೆ ಹೆಡಸಿನದಲ್ಲ, ಬರಿ ಹಾಲಿನದು—ಎಂದು ತಪ್ಪ ಎಮ್ಮೆಯಮೇಲೆ ಹಾಕುವಳು.

ಗಂಡನು, ತಮಗೆ ಎಮ್ಮೆ ಮಾರಿದವರಲ್ಲಿ ಹೋಗಿ ಕೇಳಿದ—"ಹೆಡಸು ಹಯನಿಗೆ ಮಿಗಿಲಾದ ಎಮ್ಮೆಯೆಂದು ನಮಗೆ ಭರವಸೆ ಹೇಳಿದಿರಿ. ಈಗ ಕೆನೆಯೇ ಹೊರಡುವದಿಲ್ಲವೆಂದು ನನ್ನ ಹೆಂಡತಿ ಹೇಳುತ್ತಿದ್ದಾಳೆ. ನೀವು ಸುಳ್ಳು ಹೇಳಿ ಎಮ್ಮೆ ಕೊಡಬಾರದಿತ್ತು ನೆರೆಯವರಿಗೆ?"

ಆ ರೈತನ ಹೆಂಡತಿ ಹಯನು ಮಾಡಬಲ್ಲಳು. ಆ ಕೆಲಸದಲ್ಲಿ ಬಲ್ಲಿದಳು. ಮಾರಿದ ಎಮ್ಮೆಯ ಹಯನವನ್ನು ಸಹ ಈ ಮುಂಚೆ ಮಾಡಿದ್ದಳು. ಆಕೆ ಹೇಳಿದಳು—"ತಮ್ಮಾ ನಿನ್ನ ಹೆಂಡತಿ ಹೇಳುವುದು ಸುಳ್ಳು. ಹಾಲು ಚನ್ನಾಗಿ ಕಾಸಿ ಅಂಗೈಗಡುತರ ಕೆನೆ ತೆಗೆದು ತೋರಿಸಲೇನು ನಿನಗೆ? ನಿಮ್ಮಲ್ಲಿಯೂ ಕೆನೆ ಹೊರಡುತ್ತಿರಬಹುದು. ಆದರೆ ಅದನ್ನು ನಿನ್ನ ಹೆಂಡತಿ ಅದೆಂತು ಇಲ್ಲದಾಗಿಸುತ್ತಾಳೋ ನೋಡು?"

"ಹೇಗೆ ನೋಡಲಿ?"

"ನಾನು ಎರಡು ಗೊಂಬೆ ಮಾಡಿಕೊಡುತ್ತೇನೆ. ಅವುಗಳಲ್ಲಿ ಒಂದನ್ನು ಹಾಲ ಗಡಿಗೆಯಿಡುವಲ್ಲಿ, ಇನ್ನೊಂದು ಪಾತ್ರೆಪಡಗೆ ಇಡುವಲ್ಲಿ ಗಟ್ಟಿಯಾಗಿ ನೆಡು. ಅದರಿಂದ ತಾನೇ ಹೊರಬೀಳುತ್ತದೆ ಇದ್ದ ಸಂಗತಿ" ಎಂದಳು ಆ ರೈತನ ಹೆಂಡತಿ.