ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಗಮಲ್ಲಿ ದಿಗಮಲ್ಲಿ

ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡುದಿವಸ ಇಟ್ಟುಕೊಂಡು, ಹೋಳಿಗೆ ಹುಗ್ಗಿ ಮಾಡಿ ಉಣ್ಣಿಸಿದಳು. ಮೂರನೇದಿವಸ ಮೊಮ್ಮಗಳಿಗೆ ತನ್ನ ಗಂಡನ ಕೂಡ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಟ್ಟಳು. ಮೊಮ್ಮಗಳನ್ನು ಆಗಲುವಾಗ ಅದೆಷ್ಟು ತಳಮಳಿಸಿದರೂ, ಆಕೆಯು ಗಂಡನ ಮನೆಗೆ ಹೋಗುವ ಸಡಗರವನ್ನು ನೋಡಿ ಮುದುಕಿಗೆ ಹಿಡಿಸಲಾರದಷ್ಟು ಹಿಗ್ಗಾಯಿತು—"ಹೋಗಿ ಬಾ ನನ್ನ ಹಗಮಲ್ಲೀ, ದಿಗಮಲ್ಲೀ; ಸುಖದಿಂದ ಹೋಗಿ ಬಾ?" ಎಂದು ಸೂಸುವ ಹಿಗ್ಗಿನಲ್ಲಿ ನುಡಿದು ಬೀಳ್ಕೊಟ್ಟಳು.

ಎತ್ತಿನ ಮೇಲೆ ಹೆಂಡತಿಯನ್ನು ಕುಳ್ಳಿರಿಸಿ ಗಂಡನು ಅದನ್ನು ಬೆಂಬಳಿಸಿ ತನ್ನೂರ ಹಾದಿ ಹಿಡಿದನು. ಒಂದೆರಡು ಹರದಾರಿ ದಾರಿ ಸಾಗಿದ ಬಳಿಕ ಗಂಡನು ಕೇಳಿದನು ಹೆಂಡತಿಗೆ "ನಿಮ್ಮ ಅಜ್ಜಿ ಹಾಗೇಕೆಂದಳು ಹಗಮಲ್ಲಿ ದಿಗಮಲ್ಲಿ ಎಂದು? ಏನದರ ಅರ್ಥ?" "ಅದು ಆಕೆ ಪ್ರೀತಿಯಿಂದ ಆಡಿದ ಮಾತು. ಅದರರ್ಥ ಬರುವದಿಲ್ಲ. ಬೇಕೆಂದರೆ ಮಾಡಿಯೇ ತೋರಿಸುತ್ತೇನೆ" ಎಂದಳು ಹೆಂಡತಿ.

ಮುಂದಿನೂರ ದಾಟುತ್ತಲೆ ಗಂಡನು ಒಂದು ಗಿಡದ ಕೆಳಗೆ ಎತ್ತು ಬಿಟ್ಟು ಕುಳಿತುಕೊಂಡನು. ಹೆಂಡತಿ ಅಲ್ಲಿಂದ ಊರಮುಂದಿನ ಹಳ್ಳದ ಕಡೆಗೆ ಸಾಗಿದಳು. ಹಳ್ಳದ ಬದಿಹಿಡಿದು ಬರುತ್ತಿರುವ ನಾಲ್ವರನ್ನು ಕಂಡು, ಅವರು ಒಂದು ಕೂಸಿನ ಅಂತ್ಯಕ್ರಿಯೆ ಮಾಡಿಬಂದರೆಂದು ತಿಳಕೊಂಡು ಗೋರಿ ಮರಡಿಗೆ ನಡೆದಳು. ಗೋರಿಯನ್ನಗಿದು ಕೂಸಿನ ಶವವನ್ನೆತ್ತಿ ಅರಿವೆಯಲ್ಲಿ ಸುತ್ತಿಕೊಂಡು, ಊರಲ್ಲಿ ಹೊಕ್ಕು ಭಿಕ್ಷುಕಳಂತೆ ಮನೆಮನೆಯಲ್ಲಿ ಭಿಕ್ಷೆ ಬೇಡತೊಡಗಿದಳು.

ಒಂದು ದೊಡ್ಡ ಮನೆಯ ಮುಂದೆ ನಿಂತು, ಭಿಕ್ಷೆ ಹಾಕಿರೆಂದು ಕೀಸರಿಡುವಂತೆ ಕೂಗಹತ್ತಲು ಮನೆಯವನು ಬೇಸರಗೊಂಡು ಬಂದವನೇ ಆಕೆಯನ್ನು ನುಗಿಸಿದನು. ಅಷ್ಟೇ ನೆವವಾಯಿತು. ಭಿಕ್ಷುಕಿ ಒತ್ತಟ್ಟಿಗೆ, ಆಕೆಯ ಕೈಯೊಳಗಿನ