ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬುದ್ಧಿವಂತಿಕೆಯ ಕಥೆಗಳು

೧೩೧

ಕೂಸು ಒತ್ತಟ್ಟಿಗೆ ಬೀಳಲು, ಆತನೇ ಆಕೆಯನ್ನ ಹಿಡಿದೆತ್ತಿ ಆಕೆಯ ಕೂಸನ್ನು ಆಕೆಯ ಕೈಗೆ ಕೊಟ್ಟನು. ಕೂಸು ಪೆಟ್ಟು ಬಡಿದು ಸತ್ತಿತೆಂದು ಬೋರಾಡಿ ಅಳತೊಡಗಲು ಮನೆಯವನು ಹೆದರಿಕೆಯಿಂದ ಆಕೆಯ ಕೈಯಲ್ಲಿ ಮುಚ್ಚಿ ನೂರು ರೂಪಾಯಿಗಳನ್ನು ಇಟ್ಟನು. ಆಕೆ ಮೆಲ್ಲನೆ ಅಲ್ಲಿಂದ ಕಾಲ್ತೆಗೆದು ಗಂಡನು ಕುಳಿತಲ್ಲಿಗೆ ಹೋಗಿ ಆತನಿಗೆ ಆ ನೂರು ರೂಪಾಯಿಗಳನ್ನು ಎಣಿಸಿಕೊಡುತ್ತ ಹೇಳಿದಳು—"ಇದೇ ಹಗಮಲ್ಲಿತನ. ಇನ್ನು ದಿಗಮಲ್ಲಿತನವನ್ನು ತೋರಿಸುವೆ."

ಅದೇ ಊರಿನ ಆಚೆಯ ಓಣೆಯಲ್ಲಿ ಒಬ್ಬ ನಿಪುತ್ರಿಕ ಶ್ರೀಮಂತನು ಸತ್ತಿದ್ದನು. ಆತನ ಮೂವರು ಹೆಂಡರು ಬಡಬಡಕೊಂಡು ಅಳುತ್ತಿದ್ದರು. ಆ ಸಂದರ್ಭವನ್ನು ಲಕ್ಷ್ಯಿಸಿ, ಆ ಹೆಣ್ಣು ಮಗಳು ಎದೆಎದೆ ಬಡಕೊಂಡು, ಕೈ ಹಿಡಿದವನು ಅಗಲಿ ಹೋದನೆಂದು ಹಾಡಿಹಾಡಿಕೊಂಡು ಅಳತೊಡಗಿದಳು. ನೆರೆದವರಿಗೆಲ್ಲ ಅನಿಸಿತು - ಈಕೆಯೂ ಒಬ್ಬ ಹೆಂಡತಿಯಿರಬೇಕು ಶ್ರೀಮಂತನಿಗೆ. ಮಕ್ಕಳ ಸಲುವಾಗಿ ಒಟ್ಟಿಗೆ ನಾಲ್ಕು ಜನ ಹೆಂಡಿರನ್ನು ಮಾಡಿಕೊಂಡಿದ್ದನೆಂದು ಲೆಕ್ಕ ಹಾಕಿದರು.

ಅಂತ್ಯವಿಧಿ ಮುಗಿಯಿತು.

ಶ್ರೀಮಂತನ ಆಸ್ತಿಯನ್ನೆಲ್ಲ ಆತನ ನಾಲ್ವರು ಹೆಂಡರಿಗೆ ಹಂಚಿಕೊಟ್ಟರು ಸಾಮಾಜಿಕರು. ಆತನಿಗೆ ಮಕ್ಕಳೇ ಇಲ್ಲವೆಂದಾಗ ಆತನ ಆಸ್ತಿಗೆ ಹೆಂಡಂದಿರೇ ಹಕ್ಕು ದಾರರಲ್ಲವೇ?

ತನ್ನ ಪಾಲಿಗೆ ಬಂದ ದ್ರವ್ಯವನ್ನೆಲ್ಲ ಗಂಟುಕಟ್ಟಿದಳು. ಆ ಮೇಲೆ ಅದನ್ನು ಹೊತ್ತುಕೊಂಡು ಗಂಡನು ಇಳಿದುಕೊಂಡ ಸ್ಥಳಕ್ಕೆ ಹೋದಳು.

"ಇದೇನು ತಂದೆ" ಎಂದು ಕೇಳಿದನು ಗಂಡ.

"ನೋಡಿಕೋ" ಎಂದು ನುಡಿದು ಹೆಂಡತಿಯು ಬೆಳ್ಳಿ ಬಂಗಾರ, ಮುತ್ತು ರತ್ನ, ರೂಪಾಯಿ ಎಲ್ಲವನ್ನು ತೋರಿಸಿದಳು.

"ಇದನ್ನೆಲ್ಲ ಹೇಗೆ ದೊರಕಿಸಿದೆ" ಎಂದು ಗಂಡನು ಕೇಳಿದನು.

"ಅದರ ಕಥೆಯನ್ನೆಲ್ಲ ಹಿಂದಿನಿಂದ ಹೇಳುವೆ. ಈಗ, ಇದಕ್ಕೇ ದಿಗಮಲ್ಲಿತನವೆನ್ನುವರೆಂದು ಹೇಳಿದರೆ ಸಾಕು" ಎಂದಳು.

ಮರುದಿನ ನಸುಕಿನಲ್ಲಿ ಎದ್ದು ಗಂಡ-ಹೆಂಡಿರಿಬ್ಬರು ತಮ್ಮೂರ ಹಾದಿ ಹಿಡಿದರು.

 •