ತಮ್ಮಕ್ಕ—ಅಕ್ಕೆಲೆ
ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನೆಯವರಿತ್ತ ಎಕ್ಕೆಲೆಯಿಂದ ಚುಟ್ಟಕಟ್ಟೆ ಅದರಲ್ಲಿ ತಂಬಾಕು ತುಂಬಿ, ಮೇಲೆ ಬೆಂಕಿಯ ಕಿಡಿಯಿಟ್ಟು ಧೂಮ್ರಪಾನ ಮಾಡುತ್ತಿದ್ದರು.
ಎಕ್ಕೆಲೆ ತಂಬಾಕುಗಳಿಗೆ ಅಷ್ಟೊಂದು ದೊಡ್ಡಸ್ತಿಕೆ ಬರಲು ಕಾರಣವೇನು? ಎಕ್ಕೆಲೆ ತಂಬಾಕುಗಳು ಹುಟ್ಟಿಕೊಂಡಿದ್ದು ಎಂದಿನಿಂದ?
ಬಹಳ ಹಿಂದಿನ ಕಾಲದಲ್ಲಿ ಅಂದರೆ ಈ ಭೂಮಿಯಮೇಲೆ ಮನುಷ್ಯಪ್ರಾಣಿ ಹುಟ್ಟಿಬಂದ ಬಳಿಕ, ಮನೆಯೊಳಗಿನ ಗಂಡು ಹೆಣ್ಣುಗಳಿಗೆ ಹೊಂದಾಣಿಕೆಗೊಳಿಸಿ ಮದುವೆ ಮಾಡುವ ಪರಿಪಾಠವಿರಿಸಿಕೊಳ್ಳಲಾಗಿತ್ತು. ಮುಂದೆ ಅನೇಕ ಶತಮಾನಗಳನ್ನು ಕಳೆಯುವ ಹೊತ್ತಿಗೆ ಮನುಷ್ಯರ ಸಂಖ್ಯೆ ಬೆಳೆಯಿತು. ಅವರು ಗುಂಪು ಗುಂಪಾಗಿ ನೆಲೆಸತೊಡಗಿದರು. ಆವಾಗ ಮನುಷ್ಯಪ್ರಮುಖರು ಹೊಸಯುಕ್ತಿಯೊಂದನ್ನು ಕಂಡುಹಿಡಿದರು. ಏನೆಂದರೆ—ಗಂಡಿಗೆ ಹೆಣ್ಣನ್ನು ಮನೆಯೊಳಗಿಂದಲೇ ತೆಗೆದುಕೊಳ್ಳದೆ ಬೇರೊಂದು ಗುಂಪಿನೊಳಗಿನಿಂದ ತರುವುದು ಒಳ್ಳೆಯದು.
ಹೀಗೆ ಕೊಡುಗೂಸುಗಳನ್ನು ಬೇರೊಂದು ಮನೆಗೆ ಕೊಡುವ ಕ್ರಮವು ಬಳಕೆಯಲ್ಲಿ ಬಂದಿತು. ಆದರೆ ಹಳೆಯ ಸಂಪ್ರದಾಯವೂ ಅಧರ್ಮವೆನಿಸುತ್ತಿರಲಿಲ್ಲ. ಬೇರೊಂದು ಗುಂಪಿಗೆ ಕೊಡಮಾಡಿದ ಹೆಣ್ಣನ್ನು ಹಬ್ಬ—ಹುಣ್ಣಿಮೆ, ಉತ್ಸವ ಆಮೋದದ ಕಾಲಕ್ಕೆ ತವರುಮನೆಗೆ ಕರೆತರತೊಡಗಿದರು.
ನಾಗರಪಂಚಮಿ ಹಬ್ಬದ ಕಾಲಕ್ಕೆ ಮನೆಯ ಹೆಣ್ಮಗಳನ್ನು ತವರಿಗೆ ಕರೆತರುವದಕ್ಕೆ ತಮ್ಮನ್ನು ಕಂಟಲಿ ಎತ್ತು ತೆಗೆದುಕೊಂಡು, ಬೇರೊಂದು ಗುಂಪು ಇರುವಲ್ಲಿಗೆ ಹೋದನು. ಅಕ್ಕನ ಅತ್ತೆ ಮಾವಂದಿರು ಯಾವ ನೆವವನ್ನೂ ಮುಂದೊಡ್ಡದೆ ಸೊಸೆಯನ್ನು ಆಕೆಯ ತವರುಮನೆಗೆ ಕಳಿಸುವ ಏರ್ಪಾಡು ಮಾಡಿದರು.