ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿವರಣಾತ್ಮಕ ಕಥೆಗಳು

೧೪೭

ಅಕ್ಕನನ್ನು ಎತ್ತಿನಮೇಲೆ ಕುಳ್ಳಿರಿಸಿಕೊಂಡು ತನ್ನೂರಿಗೆ ಸಾಗಿದ ತಮ್ಮನು, ಪ್ರಾಯದಿಂದ ತುಂಬಿತುಳುಕುವ ಅಕ್ಕನನ್ನು ಕಂಡು ತಬ್ಬಿಬ್ಬಾದನು. ಆಕೆಯು ಧರಿಸಿದ ಬಂಗಾರದೊಡವೆಗಳಿಂದ ಆಕೆಯ ಚೆಲುವು ನೂರ್ಮಡಿಸಿತ್ತು ಹಿಂದಿನ ಕಾಲವಾಗಿದ್ದರೆ ಅಕ್ಕನೇ ತನ್ನ ಹೆಂಡತಿ ಆಗುತ್ತಿದ್ದಳಲ್ಲವೇ, ಎಂದು ಎಣಿಸಿದನು. ಅದೇ ಪದ್ಧತಿ ಯೋಗ್ಯವಾಗಿತ್ತೆಂದೂ ಬಗೆದನು. ಅಕ್ಕನೂ ಏನಾದರೂ ಕೇಳಿದರೆ ತಮ್ಮನು ತನ್ನ ತಲೆಯೊಳಗೆ ಸುಳಿದಾಡುವ ವಿಚಾರವನ್ನೇ ಮುಂದೆ ಮಾಡಿ ಮರುನುಡಿಯುವನು. ದಾರಿಸಾಗುತ್ತಲೇ ಇತ್ತು.

ಹೊತ್ತು ಮುಳುಗುವ ಸಮಯವಾಯಿತು. ತಮ್ಮನ ಬುದ್ಧಿ ತೀರ ಚಂಚಲಗೊಂಡಿತು. ಅವನ ಕಂಟಲಿ ಎತ್ತು ತೀರ ನಿರ್ಜನಪ್ರದೇಶವನ್ನು ಪ್ರವೇಶಿಸಿತು. ಒಂದೆರಡು ಕೂಗಳತೆ ದಾಟಿತ್ತೋ ಇಲ್ಲವೋ ತಮ್ಮನು ಅಡ್ಡಬಂದು ಎತ್ತಿನ ಮುಗದಾಣಿ ಹಿಡಿದನು. ಅದು ಗಕ್ಕನೆ ನಿಂತಿತು. ಅಕ್ಕನಿಗೆ ಕೆಳಗಿಳಿಯಲು ಹೇಳಿದನು. ಆಕೆ ಮರುನುಡಿದಳು "ಹೊತ್ತು ಮುಳುಗಿತು, ಕತ್ತಲಾಗುವಷ್ಟರಲ್ಲಿ ಊರು ಸೇರುವುದು ಒಳ್ಳೆಯದಲ್ಲವೇ? ಹುಲಿಕರಡಿಗಳ ಬಾಯಿಗೆ ಬೀಳುವುದಾಗಲಿ, ಕಳ್ಳರ ಕೈಗೆ ಸಿಗುವದಾಗಲಿ ಅದರಿಂದ ತಪ್ಪುತ್ತದೆ. ಆದ್ದರಿಂದ ಎತ್ತನ್ನು ಅವಸರದಿಂದ ಹೊಡೆಯುವುದನ್ನು ಬಿಟ್ಟು ಇಲ್ಲೇಕೆ ಇಳಿಯಬೇಕು?"

"ಊರು ಇನ್ನು ದೂರವಿಲ್ಲ. ಇಳಿದುಬಿಡು. ನೀರು ಕುಡಿದು ಮುಂದೆ ಸಾಗೋಣ" ಎಂದು ತಮ್ಮನು ಅಕ್ಕನಿಗೆ ನೆರವು ನೀಡಿ ಎತ್ತಿನಿಂದ ಕೆಳಗಿಳಿಸಿಕೊಂಡನು. ಆಕೆಯ ಸ್ಪರ್ಶದಿಂದ ಆತನಲ್ಲಿ ವಿದ್ಯುತ್‍ಸಂಚಾರವೇ ಆದಂತಾಯಿತು.

ಮುಂದೆ ಏನು ನಡೆಯಿತೆಂಬುದನ್ನು ಹೇಳುವ ಕಾರಣವೇ ಇಲ್ಲ ಬಲಾತ್ಕಾರ! "ಇದು ಧರ್ಮವಲ್ಲ" ಎಂದು ಅಕ್ಕನು ಹಲುಬಿದಳು. "ಹಳೆಯದಾದರೇನು, ಇದು ಧರ್ಮವಾಗಿಯೇ ಇತ್ತು" ಎಂದನು ತಮ್ಮ.

"ಬಿಟ್ಟುಕೊಟ್ಟ ಧರ್ಮದದಾರಿ ಅಧರ್ಮವೇ ಅಲ್ಲವೇ? ದೇವಿ, ಭೂಮಿತಾಯಿ, ಇಲ್ಲಿ ನೀನಲ್ಲದೆ ಇನ್ನಾರೂ ಇಲ್ಲ. ಅಧರ್ಮದಿಂದ ನನ್ನನ್ನು ಉಳಿಸು ತಾಯಿ" ಎಂದು ಕೈಮುಗಿದು ಹೃತ್‌ಪೂರ್ವಕವಾಗಿ ಮೊರೆಯಿಟ್ಟಳು.

ಭೂಮಿತಾಯಿಗೆ ಕೇಳಿಸಿತೇನೋ ಆಕೆಯಮೊರೆ. ಅದು ಬಿರಿದು ಬಿಟ್ಟಿತು. ದುಃಖಾರ್ತೆಯು ನೆಲದ ಬಿರುಕಿನಲ್ಲಿ ಇಳಿಯತೊಡಗಿದಳು. ಅದನ್ನು ಕಂಡು ತಮ್ಮನು ಮುಗಿದ ಆ ಕೈಗಳೆರಡನ್ನೂ ಹಿಡಿದು ಹಿಂದೆಳೆಯತೊಡಗಿದನು.