ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೯

ಉತ್ತರೀಮಳೆ

ಅತ್ತೆ ಸೊಸೆಯರು ಹಿತ್ತಲ ಮನೆಯಲ್ಲಿ ಒಂದಿಷ್ಟು ವಾದಿಸಾಡುತ್ತಿದ್ದರು. ಅಷ್ಟರಲ್ಲಿ ಹೊಲದಿಂದ ಮಗನು ಬಂದನೆಂದು ಅತ್ತೆ ಎದ್ದು ಹೋದಳು. ಮಗನಿಗೆ ಉಣಬಡಿಸಬೇಕಲ್ಲವೇ?

ಊಟಕ್ಕೆ ಕುಳಿತ ಮಗನಿಗೆ ಉಣಬಡಿಸುತ್ತ ಹಗುರಾಗಿ ಎಳೆತೆಗೆದಳು ತಾಯಿ—"ಈ ಸೊಸೆ ಬೇಡಪ್ಪ ಮಗನೇ, ಇವಳನ್ನು ತವರಿಗೆ ಕಳಿಸು."

"ಕಳಿಸಿಬಿಡುವುದಕ್ಕೆ ಎತ್ತೇ ಎಮ್ಮೆಯೇ? ಖರ್ಚು—ಮಾಡಿತಂದು ಕೈಹಿಡಿದವಳನ್ನು ಹೇಗೆ ಬಿಡುವುದವ್ವ" ಎಂದು ಕೇಳಿದನು ಮಗ.

"ನನ್ನ ಚಿನ್ನದ ಒಂಕೆ ಮಾರುವೆನು. ಸೂತ್ರದ ಗೊಂಬೆಯಂಥ ಹೆಣ್ಣು ತರುವೆನು. ಮಗನೇ, ಬಿಟ್ಟುಬಿಡು ಇವಳನ್ನು?" ತಾಯಿಯ ಆಗ್ರಹ.

"ಆವಲ್ಲ ಕರುವಲ್ಲ, ಬೊಗಸೆತುಂಬ ತೆರವುಕೊಟ್ಟು ತಂದವಳನ್ನು ಬಿಡುವುದೆಂತು ತಾಯಿ?"

"ಕಿವಿಯೊಳಗಿನ ವಜ್ರದೋಲೆ ಮಾರುತ್ತೇನೆ. ಬ್ಯಾಂಗಡಿಯಂಥ ಹೆಣ್ಣು ತರುತ್ತೇನೆ. ಬಿಟ್ಟುಬಿಡು ನನ್ನ ಮಗನೇ ಇವಳನ್ನು" ಮತ್ತೆಯೂ ಅದೇ ಒತ್ತಾಯ ತಾಯಿಯದು.

"ಕೊಂಡುತಂದ ಆಡು-ಕುರಿ ಬಿಟ್ಟುಬಿಡುವುದಕ್ಕಾಗುವದಿಲ್ಲ. ದೈವಸಾಕ್ಷಿಯಾಗಿ ಕೈಹಿಡಿದವಳನ್ನು ಹೇಗೆ ಬಿಡುವುದು ಅವ್ವಾ?"

"ಇದೋ ಈ ಮೂಗುತಿಯನ್ನು ಮಾರುತ್ತೇನೆ. ಮುತ್ತಿನಂಥ ಮಡದಿಯನ್ನು ತರುತ್ತೇನೆ. ಬಿಟ್ಟುಬಿಡು ಇವಳನ್ನು?" ಅನ್ನುತ್ತಾಳೆ ತಾಯಿ.

ನೂರು ಸಾರೆ ಹೇಳುತ್ತ ಬಂದರೆ ಸುಳ್ಳೇ ಸತ್ಯವಾಗುವದಂತೆ. ಛಲಹಿಡಿದು ಬಿಟ್ಟು ಮಾತು ಗೆಲ್ಲಲೇ ಬೇಕಲ್ಲವೇ? ಸೊಸೆ ತನ್ನ ತವರಿಗೆ ಹೊರಟುನಿಂತಳು.

"ಸೊಸೆ ಮುದ್ದೇ, ನೆಲುವಿನ ಮೇಲಿಟ್ಟ ನೆಲ್ಲಕ್ಕಿ ಬೋನವನ್ನಾದರೂ ಉಂಡು ಹೋಗು" ಎಂದು ಅತ್ತೆ ತೋರಿಕೆಯಲ್ಲಿ ಆಗ್ರಹಪಡಿಸಿದರೆ, ಸೊಸೆ ಏನೆಂದು ಮರುನುಡಿಯುತ್ತಾಳೆ—"ಅದನ್ನು ನೀನುಣ್ಣು ಇಲ್ಲವೆ ಮಗನಿಗೆ ಉಣಬಡಿಸು. ಉಳಿದರೆ ಬರುವವಳಿಗಾಗಿ ಕಾಯ್ದಿಡು."