ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೦

ಜನಪದ ಕಥೆಗಳು

"ಚೆಟ್ಟಿಗೆಯೊಳಗಿರುವ ಗಟ್ಟಿತುಪ್ಪವೊಂದಿಷ್ಟು ತಿಂದಾದರೂ ಹೋಗಮ್ಮ ಮುದ್ದು ಸೊಸೆಯೇ" ಎಂದು ಅತ್ತೆಯಾಡಿದ ಉಪಕಾರದ ಮಾತಿಗೆ ಸೊಸೆ ಹೇಳುತ್ತಾಳೆ — "ನೀನಾದರೂ ತಿನ್ನು. ನಿನ್ನ ಮಗನಿಗಾದರೂ ತಿನ್ನಿಸು. ಅದರಲ್ಲಿ ಒಂದಿಷ್ಟು ಬರುವವಳಿಗಾಗಿ ಕಾಯ್ದಿರಿಸು."

ಒಲೆಯಮೇಲಿಟ್ಟ ಹಸುವಿನ ಹಾಲನ್ನಾದರೂ ಕುಡಿದು ಹೋಗು ಎಂದಾಗ ಹಾಗೂ, ಪೆಟ್ಟಿಗೆಯೊಳಗಿನ ಸಂಣಂಚಿನ ಕುಪ್ಪಸವನ್ನಾದರೂ ತೊಟ್ಟುಕೊಂಡು ಹೋಗು ಎಂದಾಗ, ಸೊಸೆ ಅದೇರೀತಿಯಲ್ಲಿ ಉತ್ತರಿಸುತ್ತಾಳೆ.

ಹೇಳಿದ್ದಕ್ಕೆಲ್ಲ ಮರಳಿ ಉತ್ತರ ಕೊಡುವಳೆಂದು ಆ ಸೊಸೆಗೆ ಉತ್ತರಾದೇವಿಯೆಂದು ಹೆಸರಾಯಿತೇನೋ. ಅಂತೂ ಉತ್ತರಾದೇವಿ ಅತ್ತೆಯ ಮನೆಯಿಂದ ತವರು ಮನೆಯತ್ತ ಹೊರಟಳು.

ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡಿದ್ದಾಳೆ. ಇನ್ನೊಂದನ್ನು ಕೈಹಿಡಿದು ನಡೆಸುತ್ತಿದ್ದಾಳೆ. ತುಸು ಮುಂದೆ ಸಾಗುವಷ್ಟರಲ್ಲಿ ಬಾಳೆ ಬನವನ್ನು ಕಂಡು, ಅದಕ್ಕೆ ಹೇಳುತ್ತಾಳೆ, ತವರುಮನೆಗೆ ಹೋಗುವೆನೆಂದು. "ನೀನು ಹೋದರೆ ನಮಗೆ ನೀರುಣಿಸುವವರಾರು? ಹಣ್ಣಾದರೆ ತಿನ್ನುವವರಾರು?” ಎಂದು ಕೇಳಿತು ಬಾಳೆಯ ಬನ.

"ನೀರುಣ್ಣಿಸುವದಕ್ಕೂ ಹಣ್ಣು ತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ" ಎಂದು ಮರುನುಡಿಯುತ್ತಾಳೆ ಉತ್ತರೆ.

ಇನ್ನೂ ಮುಂದೆ ಹೋದಾಗ ಕಿತ್ತಳೆಯ ಬನಕ್ಕೂ ಹೇಳುತ್ತಾಳೆ ತವರೂರಿಗೆ ಹೋಗುವೆನೆಂದು. ಕಿತ್ತಳೆ ಬನವೂ ಕೇಳುತ್ತದೆ — "ನೀನು ಹೋದರೆ ನನಗೆ ನೀರುಣ್ಣಿಸುವರಾರು? ಹಣ್ಣಾದರೆ ತಿನ್ನುವವರಾರು"" ಎಂದು. ಅದಕ್ಕೂ ಮರುನುಡಿಯುತ್ತಾಳೆ ಆದೇಬಗೆಯಾಗಿ -"ನೀರುಣಿಸುವದಕ್ಕೂ ಹಣ್ಣುತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ."

ಅತ್ತೆಯಾದವಳು ಸೀರೆಕುಪ್ಪಸಗಳ ದೊಡ್ಡ ಗಂಟನ್ನೇ ಆಕೆಯ ಮುಂದೆ ಇಳುಹಿದರೆ ಸೊಸೆ — "ಇನ್ನಾವ ಸೀರೆಯೂ ಬೇಡ. ಬೇರಾವ ಕುಪ್ಪಸವೂ ಬೇಡ, ನಮ್ಮವ್ವ ನನಗೆಂದು ಕೊಟ್ಟ ಸೀರೆಕುಪ್ಪಸ ಎತ್ತಿ ಇಡಿರಿ ಈಚೆಗೆ" ಎಂದಳು.

ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು, ಕಾಲ್ಗೆಜ್ಜೆಯನ್ನು ಗಿಲಿಸುತ್ತ ಹೊರಟ ಆಕೆಯನ್ನು ಕಂಡು ದೊಡ್ಡಮನುಷ್ಯರೊಬ್ಬರು ಕೇಳಿದರು — "ನೀನಾವ ರಾಜನ ಸೊಸೆಯಮ್ಮ?"