ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿವರಣಾತ್ಮಕ ಕಥೆಗಳು
೧೫೧

"ನಾನಾವ ರಾಜನ ಸೊಸೆಯಾಗಲಿ? ಅತ್ತೆಮ್ಮನ ಉರವಣಿಗೆಯಲ್ಲಿ ತವರೂರಿಗೆ ಹೊರಟಿದ್ದೇನೆ" ಎಂದು ಉತ್ತರಾ ಮರುನುಡಿಯುತ್ತಾಳೆ.

ಮೊದಲು ತಂದೆಯ ಮನೆಗೆ ಹೋಗಿ — "ಅಪ್ಪ, ಕದತೆಗೆ, ಅಪ್ಪಯ್ಯ, ಕದತೆಗೆಯಿರಿ. ನನ್ನಪ್ಪಾ ನನಗೆ ಕದತೆಗೆ" ಎಂದು ಕೂಗಲು ಒಳಗಿನಿಂದ ತಂದೆಯ ಉತ್ತರ ಬರುತ್ತದೆ.

"ಕಂದವ್ವನನ್ನು ತೊಡೆಯಮೇಲೆ ಹಾಕಿಕೊಂಡು ಚಾಪೆಯ ಮೇಲೆ ಕುಳಿತಿದ್ದೇನೆ. ದೀಪದ ಬುರುಡೆ ತುಂಬಿದೆ. ಹೇಗೆ ಎದ್ದು ಬರಲಿ? ಮಗಳೇ, ನಿಮ್ಮಣ್ಣನ ಮನೆಗೆ ಹೋಗವ್ವ"

ಬಳಿಕ ಅಣ್ಣನ ಮನೆಗೆ ಹೋಗಿ ಅಲ್ಲಿಯೂ ಅದೇ ಬಗೆಯಾಗಿ ಹಲುಬಿದರೆ, ಅಣ್ಣನ ತೊಡೆಯ ಮೇಲೆ ಮುದ್ದುಮಗು ಮಲಗಿದ್ದರಿಂದ ಅವನಿಗೂ ಎದ್ದು ಬರಲಿಕ್ಕಾಗಲಿಲ್ಲ. ಅಕ್ಕನಮನೆಗೆ ಹೋಗಲು ತಿಳಿಸಿದನು.

ಅಕ್ಕನ ಮನೆ ಆಯಿತು. ತಂಗೆಯಮನೆ ಆಯಿತು. ಅಲ್ಲಿ ತೋಳಿನಲ್ಲಿ ಕೆಂಪವ್ವ ಮಲಗಿದ್ದರೆ, ಇಲ್ಲಿ ಕಾಳವ್ವ ಮಲಗಿದ್ದಳು. ಆದ್ದರಿಂದ ಎದ್ದು ಬರುವವರಾರು? ತಂಗಿಯ ಸೂಚನೆಯಂತೆ ಅವ್ವನ ಮನೆಗೆ ಹೋದಳು. ಕಣ್ಣೀರು ಕೋಡಿಯಾಗಿ ಹರಿಯುತ್ತದೆ.

"ಕದ ತೆಗೆ ಅವ್ವಾ" ಅಂದಾಗ ಅವಳು ಕದತೆಗೆದು ಮಗಳನ್ನು ಅಪ್ಪಿಕೊಂಡು ತಲೆತಡವಿದಳು. ಕಣ್ಣೀರು ಹೊಳೆಯಾಗಿ ಹರಿಸುತ್ತ ಹೇಳಿದಳು "ನಿನ್ನಪ್ಪ ನನ್ನನ್ನು ಉರಿಸಿದನು. ನನ್ನ ಪಾಡು ನಿನಗೂ ತಗುಲಿತೇ? ನೀನು ಉತ್ತರಾಮಳೆಯಾಗಿ ಹೊರಡಿನ್ನು".

ಮಗಳು ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು ಕಾಲುಗೆಜ್ಜೆ ಗಿಲಕ್ ಅನ್ನುತ್ತಿರಲಿ, ಉತ್ತರೆ ಮಳೆಯಾಗಿ ಹೊರಟಳು.

ಉತ್ತರೆಮಳೆಗಾಗಿ ದಾರಿಕಾಯದವರು ಯಾರಿದ್ದಾರೆ?

 •