ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶೆ ಬಹಳ ಕೆಟ್ಟದು

ಕಾಶಮ್ಮ - ಮಲ್ಲೇಶಿ ಎಂಬ ಅಜ್ಜಿ ಮೊಮ್ಮಗ ಇದ್ದರು. ಮೊಮ್ಮಗನು ದುಡಿದು ತಂದಷ್ಟರಲ್ಲಿಯೇ ಅವರಿಬ್ಬರೂ ಕಷ್ಟದಿಂದ ಬಾಳ್ವೆ ಮಾಡುತ್ತಿದ್ದರು. ಒಂದು ದಿನ ಮಲ್ಲೇಶಿ ಹೇಳಿದನು ಅಜ್ಜಿಗೆ - “ಅಜ್ಜಿ, ಈ ಚಿಕ್ಕ ಹಳ್ಳಿಯಲ್ಲಿ ಬಾಳ್ವೆ ಸರಿಯಾಗಿ ಸಾಗುವಂತಿಲ್ಲ. ನೆರೆಯೂರಿಗೆ ಹೋಗೋಣ.” ಅಜ್ಜಿಗೂ ಆ ಮಾತು ಸಮ್ಮತವಾಯಿತು. ಹೊರಟೇಬಿಟ್ಟರು ಬೆಣ್ಣೆಕಟ್ಟೆಗೆ.

ಬೆಣ್ಣೆಕಟ್ಟೆಗೆ ಒಬ್ಬ ಸಾಹುಕಾರನ ಮನೆಗೆ ಹೋದಾಗ ಅವನು ಅದೇ ಉಂಡು, ಎಲೆ ಅಡಿಕೆ ಮೆಲ್ಲುತ್ತ ಕುಳಿತುಕೊಂಡಿದ್ದನು. ಅಜ್ಜಿ ಕೇಳಿದಳು “ಧನಿಯರೇ ನಾವು ಬೇರೂರಿಂದ ಬಂದಿದ್ದೇವೆ. ಇಲ್ಲಿ ದುಡಕೊಂಡು ತಿನ್ನಲಿಕ್ಕೆ. ಇರಲಿಕ್ಕೆ ಒಂದಿಷ್ಟು ಜಾಗಕೊಡಿರಿ.”

“ನಮ್ಮ ಹಿತ್ತಲಲ್ಲಿ ಕಸ ಚೆಲ್ಲುವ ಒಂದು ಗುಂಡಿಯಿದೆ. ಅದರೊಳಗಿನ ಕಸವನ್ನೆಲ್ಲ ನಮ್ಮ ತೋಟಕ್ಕೊಯ್ದು ಹಾಕಿ ಆ ತೋಟದಲ್ಲಿರುವ ಒಂದೆರಡು ಮುರುಕು ತಗಡುಗಳನ್ನು ತಂದು ಆಶ್ರಯ ಮಾಡಿಕೊಂಡು ಇರುವಿರಾ ?” ಸಾಹುಕಾರನು ಕೇಳಿದನು.

“ಆ ಜಾಗದ ಬಾಡಿಗೆ ಎಷ್ಟು ?” ಅಜ್ಜಿಯ ಪ್ರಶ್ನೆ.

“ನಮ್ಮಲ್ಲಿರುವ ನಾಲ್ಕು ಎಮ್ಮೆ, ಎರಡು ಹೋರಿ, ಮೂರು ಆಕಳುಗಳನ್ನು ಕಾಯಬೇಕು. ಅವುಗಳ ಸೆಗಣಿಯನ್ನು ಬಡಿದು ಕುಳ್ಳುಹಚ್ಚಬೇಕಲ್ಲದೆ ಅವುಗಳನ್ನು ಮಾರಿಕೊಂಡು ಬಂದು, ನಮಗೆ ರೊಕ್ಕ ಕೊಡಬೇಕು ; ಅದೇ ಬಾಡಿಗೆ.”

ಸಾಹುಕಾರನು ಹೇಳಿದ್ದಕ್ಕೆ ಮುದಿಕೆ ಒಪ್ಪಿಕೊಂಡಳು. ಮಲ್ಲೇಶಿಗೂ ಕೆಲಸ ದೊರೆತು ಉಪಜೀವನಕ್ಕೆ ದಾರಿಯಾಯಿತು.

ಶಿವನು ಸಾಹುಕಾರನನ್ನು ಪರೀಕ್ಷಿಸಬೇಕೆಂದು ಮುಪ್ಪಿನ ಭಿಕ್ಷುಕನಾಗಿ ಬಂದು ಒಂದು ದಿನ ಸಾಹುಕಾರನ ಮನೆಯ ಮುಂದೆ ನಿಂತು – “ಅನ್ನ ನೀಡಿರಿ” ಎಂದು ಕೂಗ ತೊಡಗಲು, “ಮುಂದೆ ಸಾಗು” ಎಂದು ಸಾಹುಕಾರನು ಅಬ್ಬರಿಸಿದನು. ಅದನ್ನು ಕಂಡು ಕನಿಕರವೆನಿಸಿ ಅಜ್ಜಿಯು ಆ ಮುದುಕನನ್ನು ಕರೆತಂದು ಕುಳ್ಳಿರಿಸಿ ಉಣಬಡಿಸಿದಳು. ಒಂದು ರೊಟ್ಟಿ, ಪುಂಡಿಪಲ್ಲೆ, ಹಸಿದ