ಭಿಕ್ಷುಕನು ಅದನ್ನು ಗಪಗಪನೆ ತಿಂದು ಇನ್ನೂ ಒಂದು ರೊಟ್ಟಿ ಕೇಳಿದನು. ಮೊಮ್ಮಗನಿಗಾಗಿ ಇಟ್ಟ ರೊಟ್ಟಿಯನ್ನೂ ಅಜ್ಜಿಯು ಭಿಕ್ಷುಕನಿಗೆ ನೀಡಿದಳು ಅದೂ ಸಾಕಾಗದೆ - “ಅಜ್ಜೀ, ನೀನು ಬಯ್ದರೂ ಚಿಂತೆಯಿಲ್ಲ. ಇನ್ನೊಂದು ರೊಟ್ಟಿ ಕೊಡಮ್ಮ” ಎಂದನು ಆ ಭಿಕ್ಷುಕ.
ಅಜ್ಜಿಯ ಬಳಿಯಲ್ಲಿಯೂ ರೊಟ್ಟಿ ಉಳಿದಿರಲಿಲ್ಲ. ವಿಚಾರಿಸತೊಡಗಿದಳು. ಮರು ಕ್ಷಣದಲ್ಲಿ ಏನೋ ಹೊಳೆದಂತಾಗಿ ಅಲ್ಲಿಂದೆದ್ದು ಸಾಹುಕಾರನ ಮನೆಗೆ ಹೋಗಿ ಒಂದು ರೊಟ್ಟಿಯನ್ನು ಕೈಗಡ ಕೇಳಿದಳು. “ರೊಟ್ಟಿಯನ್ನು ಕೈಗಡ ಕೊಡುವದಿಲ್ಲ. ಸಾಲವಾಗಿ ಕೊಡುತ್ತೇನೆ. ಅದಕ್ಕೆ ಬಡ್ಡಿ ಬೀಳುತ್ತದೆ” ಎಂದನು.
ಅಜ್ಜಿ ಅದಕ್ಕೊಪ್ಪಲು ಸಾಹುಕಾರನು ಒಳಗೆ ಹೋಗಿ ಹೆಂಡತಿಗೆ ಹೇಳಿದನು, ಕಿವಿಯಲ್ಲಿ - “ತುಸು ಹಿಟ್ಟು ಹಿಡಿದು ತೆಳ್ಳಗಿನ ಒಂದು ರೊಟ್ಟಿ ಮಾಡಿಕೊಡು.” ಸಾಹುಕಾರನಿತ್ತ ರೊಟ್ಟಿಯನ್ನು ತಂದು ಅಜ್ಜಿ ಭಿಕ್ಷುಕನಿಗೆ ನೀಡಿದಳು. ಆತನು ಉಂಡು ಸಂತುಷ್ಟನಾಗಿ ಅಜ್ಜಿಗೊಂದು ದುಡ್ಡುಕೊಟ್ಟು - “ನಿನ್ನ ಮೊಮ್ಮಗನಿಗೆ ಚುರುಮುರಿ ತಿನ್ನಲಿಕ್ಕೆ” ಎಂದನು. ಅಜ್ಜಿ ಆ ದುಡ್ಡನ್ನು ತನ್ನ ಮುರುಕ ಪೆಟ್ಟಿಗೆಯಲ್ಲಿಟ್ಟಳು.
ಮಧ್ಯಾಹ್ನದ ಹೊತ್ತಿಗೆ ಮಲ್ಲೇಶಿ ಹೊಲದಿಂದ ಹಸಿದು ಬಂದು, ಊಟಕ್ಕೆ ಸಿದ್ಧನಾದನು. ಅಜ್ಜಿಗೇನೂ ತಿಳಿಯದಾಯಿತು. ಮನೆಯಲ್ಲಿ ರೊಟ್ಟಿಯೂ ಇರಲಿಲ್ಲ. ಹಿಟ್ಟೂ ಇರಲಿಲ್ಲ. “ಒಂದು ದುಡ್ಡ ಅದೆ, ಚುರುಮುರಿಕೊಂಡು ತಿನ್ನು” ಎಂದು ಪೆಟ್ಟಿಗೆ ತೆಗೆದು ನೋಡಿದಾಗ, ಪೆಟ್ಟಿಗೆಯ ತುಂಬ ಬಂಗಾರವಾಗಿತ್ತು. “ಇದನ್ನೆಲ್ಲಿಂದ ತಂದೆ ? ಯಾರು ಕೊಟ್ಟರು ?” ಎಂದು ಕೇಳಿದನು ಮಲ್ಲೇಶಿ. ಅಜ್ಜಿ ನಡೆದ ಕಥೆಯನ್ನೆಲ್ಲ ಹೇಳಿದನು.
ಪೆಟ್ಟಿಗೆಯೊಳಗಿನ ಅರ್ಧಬಂಗಾರ ಮಾರಿ, ಬೆಚ್ಚಗಿನ ಮನೆ ಕಟ್ಟಿಸಿದರು. ಎತ್ತು ಗಾಡಿ ಕೊಂಡರು. ಮಲ್ಲೇಶಿಯೂ ಒಬ್ಬ ಸಾಹುಕಾರನೇ ಆಗಿ ಕುಳಿತನು, ಆ ಬೆಣ್ಣೆಕಟ್ಟಿಯಲ್ಲಿ.
ಅದನ್ನೆಲ್ಲ ಕಂಡ ಸಾಹುಕಾರನಿಗೆ ಅಸೂಯೆ ಉಂಟಾಯಿತು. ಇದೆಲ್ಲ ಐಶ್ವರ್ಯ ಏತರಿಂದ ಬಂತೆಂದು ಅಜ್ಜಿಗೆ ಕೇಳಲು ಹೆಂಡತಿಗೆ ತಿಳಿಸಿದನು. ಸಾಹುಕಾರನ ಹೆಂಡತಿ ಅಜ್ಜಿಯ ಮನೆಗೆ ಬಂದು ಕೇಳಿದರೆ - “ಭಿಕ್ಷುಕ ಮುದುಕನು ನಮ್ಮಲ್ಲಿ ಉಂಡು ಹೋಗುವಾಗ ಒಂದು ದುಡ್ಡು ಕೊಟ್ಟ ಹೋಗಿದ್ದನು. ಅದರಿಂದ ಒಂದು ಪೆಟ್ಟಿಗೆ ಬಂಗಾರವಾಗಿ ಬಿಟ್ಟಿತು. ಅದೇ ಈ ಎಲ್ಲ ಐಶ್ವರ್ಯಕ್ಕೆ ಕಾರಣ” ಎಂದಳು ಕಾಶಮ್ಮಜ್ಜಿ.