ಹೆಂಡತಿಯ ಬಾಯಿಂದ ಅಜ್ಜಿಯ ಐಶ್ವರ್ಯದ ಕಾರಣ ತಿಳಿದು ಸಾಹುಕಾರನ ಆಶೆಗೆ ಕುಡಿ ಒಡೆಯಿತು. ಒಬ್ಬ ಭಿಕ್ಷುಕನನ್ನು ಹಿಡಿದು ತಂದು, ಹುಗ್ಗಿ ಹೋಳಿಗೆ ಉಣಿಸಿದರೆ, ಆತನು ಒಂದೇ ದುಡ್ಡಲ್ಲ ಎರಡು ದುಡ್ಡು ಕೊಡುವದರಿಂದ ಎರಡು ಪೆಟ್ಟಿಗೆ ಬಂಗಾರ ಸಿದ್ಧವಾಗುವದೆಂದು ಲೆಕ್ಕ ಹಾಕಿದನು. ಶಿವನು ಅದೇ ವೇಷದಿಂದ ಕಾಣಿಸಿಕೊಳ್ಳಲು ಅವನನ್ನು ಕರೆತಂದು ಪಂಚಪಕ್ವಾನ್ನಗಳನ್ನು ಸಾಕುಸಾಕೆಂದರೂ ಉಣಬಡಿಸಿದರು. ಭಿಕ್ಷುಕನು ಉಂಡುಹೋಗುವಾಗ ವಾಡಿಕೆಯಂತೆ ಕೊಟ್ಟ ದುಡ್ಡನ್ನೂ ಸಾಹುಕಾರನು ತಿಜೋರಿಯಲ್ಲಿಟ್ಟು ಕೀಲಿಹಾಕಿದನು.
ಅಂದು ರಾತ್ರಿ ಆತನಿಗೆ ನಿದ್ರೆಯೇ ಹತ್ತಲಿಲ್ಲ. ಹೊತ್ತು ಹೊರಡುವ ಸಂದರ್ಭವನ್ನೇ ನೋಡುತ್ತಿದ್ದನು. ತಡವಾಗಿಯಾದರೂ ಒಮ್ಮೆ ಬೆಳಗಾಯಿತು. ಸಾಹುಕಾರನು ಎದ್ದವನೇ ಮುಖಸಹ ತೊಳಕೊಳ್ಳದೆ, ಹೆಂಡತಿಯನ್ನು ಕರೆದು ತಿಜೋರಿಯನ್ನು ತೆರೆದರೆ, ಅಲ್ಲೇನು ಕಂಡನು? ಹಣವೆಲ್ಲ ಹಂಚಾಗಿತ್ತು. ಬಂಗಾರವೆಲ್ಲ ಇದ್ದಿಲಾಗಿತ್ತು. ವಸ್ತುಒಡವೆಗಳೆಲ್ಲ ಚೀಪುಗಲ್ಲು ಆಗಿದ್ದವು. ಏತಕ್ಕಾಗಿ ಬದುಕುವುದಿನ್ನು - ಎಂದು ನಿರಾಶನಾಗಿ ಕೈಯಾಡಿಸುವಷ್ಟರಲ್ಲಿ ಅವನ ಕೈಗೆ ಒಂದು ಕಾಗದ ಸಿಕ್ಕಿತು. ಅದನ್ನೆತ್ತಿಕೊಂಡು ಬಿಚ್ಚಿ ನೋಡುತ್ತಾನೆ, ಒಳಗೆ ಏನೋ ಬರೆದಿದೆ-
“ಆಶೆ ಬಹಳ ಕೆಟ್ಟದು. ಆಶೆಬುರುಕನಾಗಬಾರದು.” ಆ ಪಾಠ ಹೇಳಿಸಿಕೊಳ್ಳಲಿಕ್ಕೆ ಅದೆಷ್ಟು ಶುಲ್ಕವೀಯಬೇಕಾಯಿತಲ್ಲ ಆ ಸಾಹುಕಾರ !