ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೫

ಮಿಡಿನಾಗೇಂದ್ರ

ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಮಕ್ಕಳಿದ್ದಿಲ್ಲ; ಮರಿಗಳಿದ್ದಿಲ್ಲ. ಅಂಬಾಣಾ ತೊರೆಯಂಥ ಜಾಗಾಕ ಹೋಗಿ ಎಲ್ಲ ಜನರಿಗೆ ಊಟ-ಉಪಶಾಂತಿ ಮಾಡಬೇಕೆಂದು ನಿಶ್ಚಯಿಸಿದರು. ನಾಲ್ಕು ಬಂಡಿ ಕಟ್ಟಿ ಸಾಹಿತ್ಯ ಸಲಕರಣೆ ಸಹಿತ ತಯಾರಾದರು. ಅಡಿಗೆ ಅಂಬಲಿ ಸಿದ್ಧವಾಂಯ್ತು. ನೈವೇದ್ಯ ತೋರಿಸತೀನಿ ಎಂದು ಹೆಂಡತಿ ನದಿಯ ಕಡೆಗೆ ಹೋದಳು. ನೈವೇದ್ಯ ತೋರಿಸಲು ನದಿಯೊಳಗಿನ ಮೀನೊಂದು ಛಟ್ಟೆಂದು ಅವಳ ಉಡಿಂಯಲ್ಲಿ ಬಿತ್ತು. “ನಿಂದು ನಿನಗ ಮುಟ್ಟಿತು. ನಂದು ನನಗ ಮುಟ್ಟಿತು. ನಡಿ ಮನೀಗಿ ಹೋಗೂಣು?” ಎಂದು ಮೀನಕ್ಕ ಹೇಳಿದಳು. ಜಲ್ಜಿ ಹೋಗಾರಿ ಎಂದು ಬಂಡಿಕಟ್ಟಿಕೊಂಡು ಹೊರಟರು. ಬಟ್ಟಲಲ್ಲಿ ನೀರು ಹಾಕಿ ಅದರೊಳಗೆ ಮೀನು ಇಟ್ಟರು. ಪಿ೦ಜರದಲ್ಲಿ ಬಟ್ಟಲ ಇಟ್ಟರು. ಮೀನು ಬೆಳೆಯಲಿಕ್ಕೆ ಹತ್ತಿತು.

ಮೀನು ಬೆಳೆದು ದೊಡ್ಡದಾಯ್ತು. ಆಮೇಲೆ ಹಾಲಿಕ್ಕಿದ್ದರೂ ಕುಡಿಂಯಲಿಲ್ಲ; ನೀರಿಕ್ಕಿದರೂ ಕುಡಿಂಯಲಿಲ್ಲ. “ಯಾಕ ಮೀನಪ್ಪ ಹಾಲಯಾಕ ಕುಡೀಲೊಲ್ಲಿ? ಲಗ್ನ ಮಾಡಂತೀಯೇನಪ್ಪ' ಎಂದಾಗ ಮೀನು ಸುಮ್ಮನೆ ಕುಳಿತಿತು. ಲಗ್ನ ಮಾಡಿಯೇ ಬಿಡಬೇಕೆಂದು ಯೋಜಿಸಿದರು. ಹಾಲು ಕುಡಿಯಲು ಕೊಟ್ಟರು.

ಹೆಣ್ಣು ಬೇಡಲು ಒಂದೂರಿಗೆ ಹೋದರು. ಅಲ್ಲಿ ಒಬ್ಬಾಕೆಗೆ ಮಲಮಗಳೊಬ್ಬಳಿದ್ದಳು; ರೂಪಿಸ್ಥ ಇದ್ದಳು; ಮಹಾ ಗುಣವಾನ್ ಇದ್ದಳು ಆಕೆ. ಪೀಡೆ ಹೋಗಲೆಂದು ಮಲಮಗಳನ್ನು ಕೊಟ್ಟುಬಿಟ್ಟಳು. ಆಕೆಂಯನ್ನು ತಲವಾರದೊಡನೆ ಲಗ್ನಮಾಡಿ ಮುಗಿಸಿದರು. ಆ ಕೊಡುಗೂಸು ನಾಲ್ಕು ವರ್ಷಗಳಾದ ಮೇಲೆ ಮೈನರೆದಳು. ಶೋಭಾನಮಾಡಲು ಯೋಚಿಸಿದರು. ಮೀನಪ್ಪ ಮತ್ತೆ ಹಾಲು ಕುಡಿಯದಾದನು; ನೀರು ಕುಡಿಯದಾದನು. ಶೋಭಾನ ಮಾಡೋಣೇನಪ್ಪ ಎಂದರೆ, ಮೀನಪ್ಪ ತಲೆ ಹಾಕಿದನು. ಹತ್ತು ಹನ್ನೆರಡು ದಿನ ಹಾಲು ಕುಡಿಯದೆ ಕುಳಿತು ಈ ಹೊತ್ತು ಶೋಭಾನ ಮಾಡುತ್ತೇವೆ ಹಾಲು ಕುಡಿಯಪ್ಪ ಅಂದಾಗ, ಮೀನಪ್ಪ ಹಾಲು ಕುಡಿದನು.