ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೬

ಜನಪದ ಕಥೆಗಳು

ಶೋಭನದ ದಿನ ಹೆಣ್ಣುಮಗಳು ಹಳ್ಳಕ್ಕೆ ನೀರು ತರಲು ಹೋಗಿದ್ದಳು. ತನ್ನ ಹಣೆಬರಹಕ್ಕೆ ತಾ ಅಳುತ್ತ ನಿಂತಿದ್ದಳು. ಅಲ್ಲೊಬ್ಬ ಗೋಸಾವಿ ಗಂಟುಬಿದ್ದನು. ಆವನು ಪರಮಾತ್ಮ ಬ೦ದಂತೆ ಬಂದನು. “ಮೀನು ನಿನ್ನ ಹಾಸಿಗೆಯಲ್ಲಿ ಬಂದ ಕೂಡಲೇ ಈ ಎರಡು ಹರಳುಗಳಿಂದ ಹೊಡೆ. ನಿನಗೆ ಮೀನು ಏನೂ ಮಾಡುವುದಿಲ್ಲ” ಎಂದು ಹೇಳಿದನು.

ಪಿಂಜರದೊಳಗಿನ ಮೀನಪ್ಪನನ್ನು ತೆಗೆದರು. ಹೆಣ್ಣುಮಗಳು ಗೋಸಾವಿ ಕೊಟ್ಟಂಥ ಹರಳು ಒಗೆದಳು. ಮೀನಿನ ವೇಷ ತೆಗೆದೊಗೆದು ಒಬ್ಬ ಪುರುಷ ಆಗಿ ನಿಂತನು. ಅಲ್ಲಿಯೇ ಇದ್ದ ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದರು. ಗಂಡ ಹೆಂಡಿರು ಮಲಗಿದರು. ಸರಿಯಾಗಿ ಹೊತ್ತು ಹೊರಡುವದಕ್ಕೆ ಬಾಗಿಲು ತೆರೆದರು. ಹೆಣ್ಣು ಮಗಳು ಬಂದು ಅತ್ತೆಯ ಕಾಲು ಬಿದ್ದಳು. ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದ ಸುದ್ದಿ ಹೇಳಿದಳು. ಮೀನಪ್ಪ ಪುರುಷಾಕಾರ ತೊಟ್ಟಿದ್ದು ನೋಡಿ, ತಾಯಿತಂದೆಗಳಿಗೆ ಬಹಳೆಂದರೆ ಬಹಳ ಹಿಗ್ಗು ಆಯ್ತು.

ಮಗ ಸೊಸಿ ಆನಂದದಿಂದ ಸಂಸಾರಮಾಡಿದರು, ಸೊಸೆಗೆ ದಿನತುಂಬಿದವು. ತವರುಮನೆಗೆ ಸಮಾಚಾರ ಹೇಳಿ ಕಳಿಸಿದರು. ಬೀಗತಿ ಐದರಲ್ಲಿ ಊಟಕ್ಕೆ ಮಾಡಿ ಕೊಂಡು ಬಂದಳು. ಅವಳು ಹೊಟ್ಟೆಯ ಮಗಳನ್ನು ಬಡವರಿಗೆ ಕೊಟ್ಟಿದ್ದಳು. “ಈಕೆಯದೆಷ್ಟು ಸೊಗಸಾಯಿತು" ಎಂದು ಮಲತಾಯಿಯ ಮನದಲ್ಲಿ ನುಚ್ಚು ಕುದಿಯುವಂತೆ ಕುದಿಯಶತ್ತಿತು. ಊಟಕ್ಕೆ ಮಾಡಿದಳು. ಮಗಳಿಗೆ ಪ್ರೀತಿಸಿದಂತೆ ಮಾಡಿ ಆಕೆಯನ್ನು ತವರುಮನೆಗೆ ಕರಕೊಂಡು ಹೋದಳು. ಹೊಟ್ಟೆಯ ಮಗಳು ಸಹ ಗರ್ಬಿಣಿಯಾಗಿ ತವರುಮನೆಗೆ ಬಂದಿದ್ದಳು. ಹೊಟ್ಟೆಯ ಮಗಳದೊಂದು ಕಣ್ಣು ಕುರುಡು. “ಹಡೆದರೆ ಕುಳ್ಳು ಕಟ್ಟಿಗೆ ಬೇಕಾಗುತ್ತವೆ” ಎಂದು ಹೇಳಿ ಇಬ್ಬರೂ ಹೆಣ್ಣುಮಕ್ಕಳನ್ನು ಕುಳ್ಳು ಆಯಲು ಕಳಿಸಿದಳು. “ನಿನ್ನ ವಸ್ತಾ ನಾ ಇಟಗೋಶೀದಿ; ನನ್ನ ವಸ್ತಾ ನೀ ಇಟ್ಟುಕೋ. ನನ್ನ ಸೀರೆ ನೀನು ಉಟ್ಟುಕೋ; ನಿನ್ನ ಸೀರೆ ನಾ ಉಟ್ಟುಗೋತೀನಿ” ಎಂದು ಜುಲುಮೆ ಮಾಡಿ, ತನ್ನ ಸೀರೆಂಯನ್ನು ಅಕ್ಕನಿಗೆ ಉಡಿಸುತ್ತಾಳೆ; ಆಕೆಯದನ್ನು ತಾನು ಉಟ್ಟುಕೊಳ್ಳುತ್ತಾಳೆ.

ಅಲ್ಲೊಂದು ಭಾರಂಗಭಾವಿಯಿತ್ತು. ನೀರು ಎಷ್ಟಿವೆ ನೋಡಬೇಕೆಂದು ಇಬ್ಬರೂ ಬಾಗಿದಾಗ ಕುರುಡಿಮಗಳು ತನ್ನಕ್ಕನನ್ನು ಬಾವಿಂಯಲ್ಲಿ ಕೆಡಹಿದಳು. ಗರ್ಭಿಣಿ ಹೆಣ್ಣುಮಗಳು ಜೋರಾಗಿ ಬಾವಿಯಲ್ಲಿ ಬಿದ್ದಾಗ ಅಲ್ಲೊಂದು ಚಮತ್ಕಾರವಾಯಿತು. ನಾಗೇಂದ್ರನ ಹೆಡೆಯಮೇಲೆ ರಸದ ಹುಣ್ಣು ಆಗಿತ್ತು. ಇವಳು ಅದರ ಮೇಲೆ ರಪ್ಪನೆ ಬಿದ್ದಾಗ ಹುಣ್ಣು ಒಡೆದು ತಣ್ಣಗಾಯಿತು.