ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜನಪದ ಕಥೆಗಳು

೨೨

ಅಂದು ರಾತ್ರಿ ಅವರಿಬ್ಬರೂ ಆಗ್ರಹಮಾಡಿ ವಸತಿ ಮಾಡಹಚ್ಚುತ್ತಾನೆ, ನೀರು ತರಲಿಕ್ಕೆ ಗುಂಡರಿಗೆ ಕೊಡುತ್ತಾನೆ. ಅಡಿಗೆ ಮಾಡಿ ಊಟಮಾಡುತ್ತಾರೆ. ಕೋಮಟಿಗರ ಹುಡುಗನು ಅವರಿಬ್ಬರೂ ಮಲಗಿದ ಕೋಣೆಯಲ್ಲಿ ಮಲಗುತ್ತಾನೆ. ಕಳ್ಳನ ಮಗಳ ಕೈಮೇಲೆಕೈ ಚಲ್ಲುತ್ತಾನೆ. ಆಗ ಆಕೆ ತನ್ನವನನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅವನಿಗೆ ಗಾಢನಿದ್ರೆ ಹತ್ತಿದೆ. ಇನ್ನು ಹೊತ್ತು ಹೊರಡಲು ಒಂದು ತಾಸು ವೇಳೆ ಇದ್ದಾಗ ಕಳ್ಳನ ಮಗಳು, ಕುದುರೆ ಕೋಗೀರು ಹಚ್ಚಿ ಊರ ಬೀಡಬೇಕೆನ್ನುತ್ತಾಳೆ. ಅವಳವನೂ ಸಿದ್ಧನಾದನು. ಹೊತ್ತರಳುವ ವೇಳೆಯಲ್ಲಿ ಹೊರಟುನಿಂತಾಗ -" ಯಾವುದಾದರೂ ನಿಮ್ಮ ಸಾಮಾನು ಬಿಟ್ಟಿರುವಿರೇನು ನೋಡಿರಿ" ಎಂದು ಕೋಮಟಿಗರವನು ಕೇಳುವನು. ಒಂದು ಗಂಟು ಕಾಣಿಸಲಿಲ್ಲ. ಅದನ್ನು ನೋಡಲಿಕ್ಕೆ ಆ ಹುಡುಗನು ಕುದುರೆ ಹತ್ತಿ, ಕಳ್ಳನ ಮಗಳ ಸಂಗಡ ಹೋಗಿಬಿಟ್ಟನು.

ಆ ಹುಡುಗನು ಇಳಕೊಂಡ ಮನೆಯಲ್ಲಿ ಹೋಗಿ ನೋಡುವಷ್ಟರಲ್ಲಿ ಬಂಗಾರದ ಒಂದು ಲಾಲ ಸಿಗುತ್ತದೆ. ಅದನ್ನು ಕಿಸೆಯಲ್ಲಿರಿಸಿಕೊಂಡು ಮನೆಗೆ ತೆರಳುತ್ತಾನೆ. ಅಪ್ಪನಿಗೆ ಹೇಳುತ್ತಾನೆ - ಇದೊಂದು ಲಾಲ ತಂದೀನಪ್ಪ> ಏಕಲಾಲ, ಪೃಥ್ವಿಕಾ ಮೋಲ - ಎಂದು ಒಗಟು ಹೇಳುತ್ತಾನೆ.

ಹೆಂಡತಿ ಊಟಕ್ಕೆ ಕೊಡುತ್ತಾಳೆ. ಆಕೆ ನೆರೆಮನೆಯ ಅಕ್ಕಸಾಲೆಯ ಮುಂದೆ ತನ್ನ ಗಂಡ ತಂದ ಬಂಗಾರದ ಲಾಲದ ಕಥೆ ಹೇಳುತ್ತಾಳೆ. ಮತ್ತು ಅದನ್ನು ತೋರಿಸುತ್ತಾಳೆ. ಅಕ್ಕ ಸಾಲಿಗನು ಆ ಲಾಲವನ್ನು ಬದಲಿಸಿ ರೊಟ್ಟಿ ಲಾಲವನ್ನು ಅಲ್ಲಿಡುತ್ತಾನೆ.

ತಾಯಿತಂದೆಗಳು ಲಾಲವನ್ನು ಪರೀಕ್ಷಿಸಲು ಅದು ಜೋಡಿಗೆ ಹಾಕುವ ಲಾಲವೆಂದು ಗೊತ್ತಾಯ್ತು. ಅವರಿಗೆ ಬಹಳ ಸಿಟ್ಟುಬಂತು - "ಇಪ್ಪತ್ತುನಾಲ್ಕು ವರ್ಷ ಕಷ್ಟಪಟ್ಟು ಇದೊಂದು ಬಿಕನಾಶಿ ಲಾಲ ತಂದಿರುವಿ. ಇಂದಿನಿಂದ ಈ ಕೊಡಲಿ ಒಯ್ದು, ಕಟ್ಟಿಗೆ ಕಡಿದುತಂದು, ಮಾರಾಟ ಮಾಡಿಕೊಂಡು ಬಾ" ಎಂದು ಅವನನ್ನು ಕಳಿಸುತ್ತಾರೆ.

ಹುಡುಗನು ಕೋಟೆಗೆ ಹೋಗುತ್ತಾನೆ. ಅಲ್ಲಿ ಅವನು ಕೋಮಟಿಗನ ಮುಂದೆ ಕಟ್ಟಿಗೆಯ ಹೊರೆಹೊತ್ತು ಸಾಗಿರುವಾಗ, ಕಳ್ಳನ ಮಗಳು ಕೋಮಟಿಗರವನಿಗೆ - "ಹೇಗೂ ನನ್ನನ್ನು ಮೋಸ ಮಾಡಿ ತಂದಿರುವಿ. ಇನ್ನು ಸೀರೆ ತಾ, ಕುಬಸ ತಾ. ನಾಲ್ಕು ಒಡ್ಡಿ ಅಕ್ಕಿ ತಾ" ಎಂದು ಹೇಳಿ ಅವನನ್ನು ಪೇಟೆಗೆ ಕಳಿಸುತ್ತಾಳೆ.