ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮ್ಯಕಥೆಗಳು

೨೧

ಪಟೇಲನು ಬಂದು ಕೇಳುತ್ತಾನೆ—"ನಿನ್ನ ಚೌಕಿ ಎಷ್ಟು?"

"ಮುನ್ನೂರು"

ದೀಪ ಹಚ್ಚಿದ ಮೇಲೆ ಎರಡು ತಾಸಿಗೆ ಬರಬೇಕು—ಎಂದಳು ಪಟೇಲನಿಗೆ. ಅದರಂತೆ ಕುಲಕರ್ಣಿಗೆ ನಾನೂರು ಎಂದು ಹೇಳಿ ನಾಲ್ಕು ತಾಸು ರಾತ್ರಿಗೆ ಬರ ಹೇಳುತ್ತಾಳೆ.

ಮಜಕೂರಿ, ಚೌಕಿದಾರ, ಪಟೇಲ, ಕುಲಕರ್ಣಿ ಹೀಗೆ ನಾಲ್ಡರಿಂದಲೂ ರೊಕ್ಕ ವಸೂಲ ಮಾಡುತ್ತಾಳೆ. ಮೊದಲಿಗೆ ಮಜಕೂರಿ ಬಂದನು. ಹೊರಸಿನ ಮೇಲೆ, ಪ್ರೀತಿತೋರಿಸಿ ಕುಳ್ಳಿರಿಸುತ್ತಾಳೆ; ಕೆನ್ನೆಗೊಂದು ಏಟುಕೊಡುತ್ತಾಳೆ. ಮಜಕೂರಿ ಹೊರಸಿನ ಮೇಲಿಂದ ಗಕ್ಕನೆ ಕೆಳಗೆ ಬೀಳುತ್ತಾನೆ. ಅಷ್ಟರಲ್ಲಿ ಚೌಕೀದಾರ ಬಂದು ಕೆಮ್ಮುತ್ತಾನೆ. ಮಜಕೂರಿಗೆ ಒಂದು ಸೀರೆ ಸುತ್ತಿಕೊಳ್ಳಲು ಹೇಳಿ, ಕಡಲೆ ಒಡೆಯುವ ಬೀಸುವ ಕಲ್ಲಿನ ಮುಂದೆ ಕುಳ್ಳಿರಿಸುತ್ತಾಳೆ.

ಎರಡನೆಯವನಾದ ಚೌಕಿದಾರನಿಗೆ ಮೆಲುಕಿನ ಮೇಲೆ ಕಡಬುಕೊಟ್ಟು ಹೊರಗಿನಿಂದ ಕೆಳಗೆ ಕೆಡಹುತ್ತಾಳೆ. ಅದೇ ಹೊತ್ತಿಗೆ ಪಟೇಲ ಬರುವ ಸಪ್ಪಳ ಕೇಳಿದ ಕೂಡಲೇ ಚೌಕೀದಾರನನ್ನು ಚಾಪೆಯಲ್ಲಿ ಸುತ್ತಿ, ಅವನ ತಲೆಯ ಮೇಲೆ ದೀಪದ ಹಣತಿ ಇಟ್ಟು ಮೂಲೆಯಲ್ಲಿ ನಿಲ್ಲಿಸುತ್ತಾಳೆ. ಪಟೇಲ ಬ೦ದು ಹೊರಸಿನ ಮೇಲೆ ಕುಳಿತನು. ಅವನ ಗೆಬ್ಬೆಗೊಂದು ಗುದ್ದಿಕೆ ಕೊಟ್ಟು ಕೆಳಗೆ ಬೀಳಿಸುವಳು. ಕುಲಕರ್ಣಿ ಕೆಮ್ಮುತ್ತ ಬರಲು, ಪಟೇಲನನ್ನು ಹೊರಸಿನ ಕೆಳಗೆ ಕಳಿಸುವಳು.

ಕುಲಕರ್ಣಿ ಹೊರಸಿನ ಮೇಲೆ ಕುಳಿತನು. ಅವನಿಗೆ ವೀಳ್ಯೆ ಮಡಚಿ ತಿನ್ನಲು ಕೊಟ್ಟಳು. ಇಬ್ಬರೂ ವೀಳ್ಯೆಮೆದ್ದು ಹೊರಸಿನ ಕೆಳಗೆ ಉಗುಳಿದರು. ಪಟೇಲನ ಮೈಯೆಲ್ಲ ಉಗುಳೇ ಉಗುಳು—ಆಕೆ ಕಾಲು ಮಡಿದು ಬರುವೆನೆಂದಳು.

ಕುದುರೆಯನ್ನು ಬಿಟ್ಟುಕೊಂಡು ಚಪರಕಿ ಬಾರಿಸಿ ಕಳ್ಳನ ಮಗಳು ತನ್ನ ಪ್ರಿಯನೊಡನೆ ಚೌವೀಸಹರಿ ಮುಂದೆ ಹೋದಳು.

ಮಜಕೂರನ ಕಡಲೆ ಒಡೆಯುವ ಕೆಲಸ ಮುಗಿಯಲೊಲ್ಲದು. ಪಣತಿಯಿಂದ ಸುಡುವ ಎಣ್ಣೆ ಚೌಕೀದಾರನ ತಲೆಯ ಮೇಲೆ ಬೀಳಹತ್ತಿದೆ. ವೀಳ್ಯದ ಉಗುಳಿನಲ್ಲಿ ಪಟೇಲನು ಉರುಳಾಡುತ್ತಿದ್ದಾನೆ. ಚೆಲುವಿಯ ಹಾದಿ ನೋಡುತ್ತ ಕುಲಕರ್ಣಿ ಹೊರಸಿನ ಮೇಲೆ ಕುಳಿತಿದ್ದಾನೆ. ಹೀಗೆ ನಾಲ್ವರಿಗೂ ಕೈಕೊಟ್ಟು ಕಳ್ಳನ ಮಗಳು ಅಲ್ಲಿಂದ ಓಡಿಹೋದಳು.

ಇಪ್ಪತ್ತುನಾಲ್ಕು ಹರದಾರಿ ಬಂದು ಕುದುರೆ ನಿಂತಲ್ಲಿ ಒಂದೂರು ಇತ್ತು. ಅಲ್ಲಿ ಕೋಮಟಿಗರ ಹುಡುಗನು ಆ ಕಳ್ಳನ ಮಗಳ ಮೇಲೆ ಮನಸ್ಸು ಮಾಡುತ್ತಾನೆ.