ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮ್ಯಕಥೆಗಳು

೨೫


ಹೊರಮೈಗೆ ಮುತ್ತು ಹಚ್ಚಿ ಒಳಮೈಗೆ ಮಾಣಿಕಹಚ್ಚಿ ಕೋದ ಬುಟ್ಟಿಯನ್ನು ಅತ್ತೆ ಆ ಕೂಡಲೇ ತಂದಿಟ್ಟಳು. ಸೊಸೆಯು ಅದನ್ನು ತಲೆಯಮೇಲೆ ಹೊತ್ತು ಕಾಲಲ್ಲಿ ಚೆಪ್ಪಲಿ ಮೆಟ್ಟಿಕೊಂಡು ತನ್ನ ರಾಯರಿರುವ ರಾಜಪಟ್ಟಣದ ದಾರಿ ಕೇಳುತ್ತ ನಡೆದಳು-

"ದನ ಕಾಯುವ ಅಣ್ಣಗಳಿರಾ, ದನಕಾಯುವ ತಮ್ಮಗಳಿರಾ, ನಮ್ಮ ರಾಯರಿರುವ ರಾಜಪಟ್ಟಣದ ದಾರಿಯಾವುದು?"

ದನಗಾಹಿಗಳು ಹೇಳಿಕೊಟ್ಟರು -"ಬಾಳೆ ಬನದ ಬಲಕ್ಕೆ ಹಾಯ್ದು, ನಿಂಬೆ ಬನದ ಎಡಕ್ಕೆ ಹಾಯ್ದು, ನಾಗಸಂಪಿಗೆಯ ನಡುವೆ ಹಾಯ್ದುಹೋಗು." ಹಸಿರು ಸೀರೆಯುಟ್ಟು, ಹಸಿರು ಕುಪ್ಪಸ ತೊಟ್ಟು, ಹಸಿರು ಸೆರಗ ಮರೆಮಾಡಿಕೊಂಡು ಎದುರು ಬರುತ್ತಿರುವ ತನ್ನಂಥ ಹರದಿಯರನ್ನು ಬಲಗೊಂಡಳು. ಅದರಂತೆ ಕೆಂಪುಸೀರೆಯುಟ್ಟು, ಕೆಂಪು ಕುಪ್ಪಸ ತೊಟ್ಟು, ಕೆಂಪು ಸೆರಗು ಮರೆಮಾಡಿಕೊಂಡು ಎದುರು ಬರುತ್ತಿರುವ ಹರದಿಯರನ್ನೂ ಬಲಗೊಂಡಳು. ಬೀದಿಯಲ್ಲಿ ಸಾಗಿದ ಆನೆಗಳ ಮುಂದೆ, ಆನೆಮರಿಗಳ ಮುಂದೆ, ಆನೆಯನ್ನೇರುವ ಚದುರಮನ್ನೆಯರ ಮಗಳು ರಾಜಬೀದಿಯಲ್ಲಿ ಹೊರಟಳು. ಒಂಟೆಗಳ ಮುಂದೆ, ಒಂಟೆಗಳನ್ನೇರುವ ಭಂಟಮನ್ನೆಯರ ಮಗಳು ರಾಜಬೀದಿಯಲ್ಲಿ ಸಾಗಿದಳು.

"ಕಾಲಲ್ಲಿ ಕಂಚಿನಪಿಲ್ಲೆ, ಕಿವಿಯಲ್ಲಿ ಹಿತ್ತಾಳೆಯ ಓಲೆ, ಸರಪಳಿ ಗಂಟಿಸರದಾಳಿ ಧರಿಸಿದ ನೀನು ಯಾವನಾಡಿನ ಕೊರವೆ" ಎಂದು ಕೇಳಿದನು ಒಬ್ಬ ತರುಣ.

"ನಾನು ಈ ನಾಡ ಕೊರವಿಯೂ ಅಲ್ಲ; ಆ ನಾಡ ಕೊರವಿಯೂ ಅಲ್ಲ. ದೇವಲೋಕದ ಕೊರವೆ. ಜಾಣ, ನಾನು ದೇವರು ಹೇಳುತ್ತೇನೆ ಕೇಳು ಸೂಳೆಯರು ನಿನ್ನನ್ನು ಮೋಡಿಮಾಡಿ ಹೊಡೆಯುತ್ತಾರೆ" ಎಂದಳು ಕೊರವಿ.

"ಮಡದಿಯನ್ನು ಬಿಟ್ಟು ಹನ್ನೆರಡುವರುಷ ಆಯ್ತು ಕೊರವೀ. ಮಡದಿಯನ್ನು ಕೂಡಿಸು. ಕೈಮುಗಿಯುತ್ತೇನೆ; ನಿನ್ನ ಕಾಲು ಬೀಳುತ್ತೇನೆ. ಅಷ್ಟು ಮಾಡಿದರೆ ನಿನ್ನನ್ನು ಕರೆತಂದು ಸೀರೆ ಕುಪ್ಪಸ ಉಡುಗೊರೆ ಕೊಡುತ್ತೇನೆ" ಎಂದನು ಆ ಜಾಣ.

"ನನ್ನ ಕಾಲ ಬೀಳುವುದಕ್ಕೆ ನನ್ನ ಕೈಮುಗಿಯುವುದಕ್ಕೆ ಯಾರಿಗೆ ಯಾವ ತಪ್ಪು ಮಾಡಿರುವಿರಿ ಮಾರಾಯರೇ? ಹೋಗೋಣ ನಡೆಯಿರಿ" ಎಂದು ಕೊರವಿ ನುಡಿದು, ಆತನ ದಿಗಿಲನ್ನೆಲ್ಲ ಬಯಲು ಮಾಡಿದಳು.