ಪಾಪಾಸಿನ ಗಂಡ
ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು - ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ ಯಾರೂ ಹೆಣ್ಣು ಕೊಡಲು ಒಪ್ಪಲಿಲ್ಲ. ಹಳ್ಳದಕೆರೆಯಾಯ್ತು. ಮತ್ತೊಂದು ಊರಾಯ್ತು ; ಮಗುದೊಂದು ಊರಾಯಿತು. ಮೂರು ಊರು ತಿರುವಿಹಾಕಿದರೂ ಹೆಣ್ಣು ಗಟ್ಟಿಯಾಗಲಿಲ್ಲ.
ಚಿನ್ನದ ಕೆರೆಗೆ ಹೋಗಿ ಕೇಳಿದರು. ಆ ಹುಡುಗೆ ಪಾಪಾಸಿನಿಂದ ಏಟು ತಿನ್ನಲು ಸಿದ್ಧಳಾದಳು. ಲಗ್ನ ಮಾಡಿದರು. ಮದುವೆಕಾಲಕ್ಕೆ ಬಾಸಿಂಗ ಕಟ್ಟಿಕೊಂಡು ನಿಂತಾಗಲೇ - “ಸೆರಗು ತೆಗೆ ನಾ ಹೊಡೀತಿನಿ” ಎಂದು ಮದುಮಗ ಗಡಿಬಿಡಿ ಮಾಡಹತ್ತಿದನು. ಹುಡುಗಿ ಬಹಳ ಚುರುಕು ಇದ್ದಳು. ಹೇಳಿದಳು - “ಇನ್ನೂ ನಾವು ಮದಿವೆ ಹಂದರದಲ್ಲಿದ್ದೇವೆ. ಈಗ ನಾವು ಶಿವಪಾರ್ವತಿ ಇದ್ದಂತೆ ಇದ್ದೇವೆ. ನಾಳೆ ಹೊಡೆಯುವಿರಂತೆ” ಎಂದು ಹೇಳಿದಳು.
ಮರುದಿನ ದೇವಕಾರ್ಯಕ್ಕೆ ಹೋಗುವುದಿದೆ. ಇಂದು ಹೊಡೆಯುವುದು ಬೇಡ ಎಂದಳು. ನಾಲ್ಕನೇ ದಿನವೂ ಹೇಳಿದಳು - ಅರಿಸಿನ ಮೈಯಲ್ಲಿದ್ದೇವೆ, ಏಟು ಕೊಡುವುದು ಬೇಡ. ಶೋಭಾನದಿನವೆಂದು ಐದನೆಯ ದಿನವೂ ದಾಟಿತು. ಮದುಮಗಳಿಗೆ ಉಡಿಯಕ್ಕಿ ಹೊಯ್ದರು. ಆಕೆಯನ್ನು ಗಂಡನ ಮನೆಗೆ ಕಳಿಸಿದರು.
ಗಂಡನ ಮನೆ ಮುಟ್ಟಿದ ಕೂಡಲೇ ಗಂಡಸು ಪಾಪಾಸು ತಕ್ಕೊಂಡು ಹೊಡೆಯಲು ಎದ್ದನು. ಆಗ ಹುಡುಗಿ ಕೇಳಿದಳು - “ಈ ಮದುವೆಯನ್ನು ನೀನು ಮಾಡಿದೆಯೋ, ನಿಮ್ಮಪ್ಪ ಮಾಡಿದನೋ ?”
“ನಮ್ಮಪ್ಪ ಮಾಡಿದ್ದಾನೆ.”
“ಅಹುದೇ ? ನಿನ್ನಿಂದ ನಾನು ಪೆಟ್ಟು ತಿನ್ನಲಾರೆ. ನೀನು ರೊಕ್ಕಗಳಿಸಿಕೊಂಡು ಬಾ. ಆವಾಗ ನಿನ್ನ ಕೈಯಿಂದ ತಪ್ಪದೆ ಏಟು ತಿನ್ನುತ್ತೇನೆ” ಎಂದು ಹೇಳಿದಳು.
ಅಪ್ಪನ ಕಡೆಯಿಂದ ನೂರು ರೂಪಾಯಿ ಇಸಗೊಂಡು ಮಗ ಹೊರಟನು. ಅಟ್ಟ ಅಟ್ಟ ಅರಣ್ಯದಲ್ಲಿ ಹೊರಟಾಗ ಹಾದಿಯಲ್ಲಿ ಒಂದು ಕಳ್ಳನ ಮನೆ ಹತ್ತಿತು.