ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅತ್ತೆಯ ಗೊ೦ಬೆ

ಒ೦ದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತ೦ದು ಆತನ ಮದುವೆಮಾಡಿದಳು.

ಗ೦ಡನ ಮನೆಗೆ ಬ೦ದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ ಎ೦ದು ಕೇಳುವಳು, ಹಾಗೆ ಕೇಳದಿದ್ದರೆ ಆಕೆಗೆ ಯಾವ ಕೆಲಸವೂ ಬಗೆಹರಿಯುತ್ತಿರಲ್ಲಿಲ್ಲ. ಹೀಗೆ ಕೆಲವು ವರ್ಷ ಸಾಗುವಷ್ಟರಲ್ಲಿ ಅಕಸ್ಮಾತ್ತಾಗಿ ಅತ್ತೆ ಯಾವುದೋ ಜಡ್ಡಿನಿ೦ದ ತೀರಿಕೊ೦ಡಳು.

ಅತ್ತೆಯ ಅಗಲಿಕೆಯಿ೦ದ ಸೊಸೆಗೆ ತೀರ ಎಡಚಾಯಿತು. ಯಾರನ್ನು ಕೇಳಬೇಕು, ಏನೆ೦ದು ಕೇಳಬೇಕು ? ಯಾವ ಕೆಲಸವೂ ಸುಗಮವಾಗಿ ಸಾಗದ೦ತಾಗಲು ಆಕೆ ಗ೦ಡನಿಗೆ ಹೇಳಿದಳು ತನ್ನ ತೊ೦ದರೆಯನ್ನು. ಗ೦ಡನು ಬಡಿಗನಿ೦ದ ಕಟ್ಟಿಗೆಯದೊ೦ದು ದೊಡ್ಡ ಗೊ೦ಬೆ ಮಾಡಿಸಿ ತ೦ದು ಹೆ೦ಡತಿಯ ಮು೦ದೆ ಇಳುಹಿಸಿದನು.

ಆ ಗೊ೦ಬೆಯನ್ನೇ ಅತ್ತೆಯೆ೦ದು ಬಗೆದು ಪ್ರತಿಯೊ೦ದು ಕೆಲಸದಲ್ಲಿ ಆಕೆಯ ಸಲಹೆ ಕೇಳತೊಡಗಿದಳು. ಅನ್ನ ಮಾಡಲೋ ರೊಟ್ಟಿ ಮಾಡಲೋ ? ರೊಟ್ಟಿ ಮಾಡುವುದಾದರೆ ಏಸು ಮಾಡಲಿ ? ಅದಕ್ಕೆ ಒಣಗಿಮಾಡಲೊ ಹಸಿಗೆ ಮಾಡಲೋ ಹೀಗೆ ಕೇಳುವಳು.

ಸೊಸೆ ಒಮ್ಮೆ ನೆರೆಹಳ್ಳಿಗೆ ಸ೦ತೆಗೆ ಹೊರಟು ನಿ೦ತು - "ಸ೦ತೆಗೆ ಬರುವಿಯೇನು ಅತ್ತೆ?" ಎ೦ದು ಕೇಳಿದಳು. ಅದಕ್ಕೆ ಉತ್ತರ ಬರದಿರಲು - "ನಡೆಯಲಿಕ್ಕಾಗುದಿಲ್ಲ. ಏನು ಬರಲಿ ಅನ್ನುವಿಯಾ ? ನಾನು ನಿನ್ನನ್ನು ಬುಟ್ಟಿಯಲ್ಲಿ ಕುಳ್ಳಿರಿಸಿಕೊ೦ಡು ಹೋಗುವೆನು ಬರುವೆಯಾ? ಹಾಗಾದರೆ ನಡೆ" ಎ೦ದು ಬುಟ್ಟಿಯನ್ನು ಹೊತ್ತುಕೊ೦ಡು ಸ೦ತೆಯೂರಿಗೆ ಹೋದಳು. ಗೊ೦ಬೆಯ ಬುಟ್ಟಿಯನ್ನು ಹೊತ್ತುಕೊ೦ಡು ಸ೦ತೆಮಾಡಲಿಕ್ಕಾಗದು ಎ೦ದು ಅದನ್ನು ಹನುಮ೦ತ ದೇವರ ಗುಡಿಯಲ್ಲಿಳುಹಿ ತಾನು ಸ೦ತೆಯೊಳಗೆ ಹೋದಳು.