ಒಂದು ಹಾಡು ಒಂದು ಕಥೆ
ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು. ಮತ್ತು ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ.
ಆಕೆಯ ಮನಸ್ಸಿನಲ್ಲಿ ಸೆರೆಸಿಕ್ಕಿ ಆ ಕಥೆ ಆ ಹಾಡು ಅಲ್ಲಿಂದ ಕಾಲ್ತೆಗೆದು ಓಡಿ ಹೋಗಬೇಕೆಂದು ಮಾಡಿದವು. ಅಲ್ಲಿ ನಿಲ್ಲುವುದೇ ಬೇಡವಾಗಿತ್ತು ಅವುಗಳಿಗೆ. ಯಾವ ಬಗೆಯಿಂದ ಹೊರಬೀಳಬೇಕು—ಎಂದು ಯೋಚಿಸಿ ಕಡೆಗೆ ಕಥೆಯು ಹೊರಬಿದ್ದು ಅಂಗಳದಲ್ಲಿ ಎರಡು ಬೂಟುಗಳಾಗಿ ಕುಳಿತಿತು. ಹಾಡು ಒಂದು ಕೋಟು ಆಗಿ ಗೂಟಿಗೆ ನೇತು ಬಿದ್ದಿತು.
ಆ ಗೃಹಿಣಿಯ ಪತಿಯು ಮನೆಗೆ ಬಂದಾಗ ಅಂಗಳದೊಳಗಿನ ಬೂಟುಗಳನ್ನೂ ಗೂಟಕ್ಕೆ ತೂಗಬಿದ್ದ ಕೋಟನ್ನೂ ಕಂಡು ಹೆಂಡತಿಗೆ ಕೇಳಿದನು - "ಯಾರು ಬಂದಿದ್ದಾರೆ ಮನೆಗೆ?"
"ಯಾರೂ ಬಂದಿಲ್ಲವಲ್ಲ!" ಎಂದಳು ಹೆಂಡತಿ.
"ಹಾಗಾದರೆ ಈ ಬೂಟು ಈ ಕೋಟು ಯಾರವು?" ಪತಿಯ ಪ್ರಶ್ನೆ.
"ನನಗೂ ತಿಳಿಯದು" ಎಂದು ಸತಿ ಹೇಳಿದ ಉತ್ತರದಿಂದ ಗಂಡನಿಗೆ ಸಮಾಧಾನವೆನಿಸಲಿಲ್ಲ. ಸಂಶಯವೇ ಹುಟ್ಟಿಕೊಂಡಿತು. ಅದರಿಂದ ಅವರ ಮಾತುಕತೆಗಳಲ್ಲಿ ವಿರಸವು ಮೊಳೆಯಿತು. ವಿರಸವು ಕದನವಾಗಿ ಪರಿಣಮಿಸಿತು. ಗಂಡನು ಹೆಂಡತಿಯ ಮೇಲೆ ಮುನಿಸಾಗಿ, ತನ್ನ ಕಂಬಳಿಯನ್ನು ತೆಗೆದುಕೊ೦ಡವನೇ ಹೊರಬಿದ್ದು ಹನುಮಂತ ದೇವರ ಗುಡಿಗೆ ಮಲಗಲು ಹೋದನು.
ಗೃಹಿಣಿಗೇನೂ ತಿಳಿಯಲಿಲ್ಲ. ಮನೆಯಲ್ಲಿ ಒಬ್ಬಳೇ ಅಡ್ಡಾದಳು. ನಿದ್ರೆಯೇ ಬರಲೊಲ್ಲದು. ಅದೇ ಚಿಂತೆ; ಅದೇ ವಿಚಾರ, ತಿರುತಿರುಗಿ ಬಂದು ನಿಲ್ಲುವದು. ಆ ಬೂಟು ಆ ಕೋಟು ಯಾರವು? ಬಹಳ ಹೊತ್ತಿನ ಮೇಲೆ ಬೇಸತ್ತು ದೀಪವನ್ನಾರಿಸಿ ಮಲಗಿಕೊಂಡಳು.