ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮ್ಯಕಥೆಗಳು

೪೭

ಆ ಊರೊಳಗಿನ ಹಣತಿಗಳೆಲ್ಲ ರಾತ್ರಿಯನ್ನು ಕಳೆಯಲು ಹನುಮಂತ ದೇವರ ಗುಡಿಗೆ ತೆರಳುವುದು ವಾಡಿಕೆಯಾಗಿತ್ತು. ಎಲ್ಲ ಮನೆಗಳಿಂದ ಹಣತಿಗಳು ಬಂದು ಬಂದು ನೆರೆದವು. ಬಹಳ ತಡಮಾಡಿ ಒಂದು ಹಣತಿ ಬಂದಿತು. ಅದಕ್ಕೆ ಉಳಿದ ಹಣತಿಗಳೆಲ್ಲ ಕೇಳಿದವು—"ಇಷ್ಟೇಕೆ ತಡ ಬರಲಿಕ್ಕೆ?"

"ನಮ್ಮ ಮನೆಯಲ್ಲಿ ಗಂಡಹೆಂಡರು ಜಗಳಾಡುತ್ತ ಕುಳಿತಿದ್ದರಿಂದ ರಾತ್ರಿಯಾಯಿತು" ಎಂದಿತು ಆ ಹಣತಿ.

"ಏಕೆ ಜಗಳಾಡಿದರು ಆ ಗಂಹಹೆಂಡಿರು?"

"ಗ೦ಡನಿಲ್ಲದಾಗ ಅವರ ಮನೆಯಂಗಳಕ್ಕೆ ಜೋಡು ಬೂಟುಗಳು ಪಡಸಾಲೆಯ ಗೂಟಿಗೆ ಒಂದು ಕೋಟು ಬಂದಿದ್ದವು. ಅವು ಯಾರವು ಎಂದು ಗಂಡ ಕೇಳಿದರೆ, ನನಗೆ ಗೊತ್ತಿಲ್ಲವೆಂದು ಹೆಂಡತಿ ಹೇಳಿದಳು. ಅದಕ್ಕಾಗಿ ಜಗಳಾಡಿದರು" ಎಂದಿತು ಹಣತಿ.

"ಹಾಗಾದರೆ ಆ ಬೂಟು ಕೋಟು ಎಲ್ಲಿಂದ ಬಂದವು?"

"ನಮ್ಮ ಮನೆಯೊಡತಿಗೆ ಒಂದು ಕಥೆ, ಒಂದು ಹಾಡು ಗೊತ್ತಿದೆ. ಎಷ್ಟು ಚಾಲುವರೆದರೂ ತಾನು ಕಲಿತ ಕಥೆ ಹೇಳಿದವಳಲ್ಲ. ತನ್ನ ಹಾಡು ಅಂದು ತೋರಿಸಿದವಳಲ್ಲ. ಸೆರೆಸಿಕ್ಕ ಆ ಕಥೆ ಹಾಡುಗಳು ಬೂಟುಕೋಟುಗಳಾಗಿ ಹೊರಬಿದ್ದಿವೆ. ಅದು ಆಕೆಗೆ ಗೊತ್ತಾಗಿಲ್ಲ."

ಆ ಹಣತಿಯ ವಿವರಣೆಯನ್ನೆಲ್ಲ ಕಂಬಳಿ ಮುಸುಕಿನಲ್ಲಿಯೇ ಕೇಳಿದ ಆ ಗಂಡನ ಸಂಶಯವೆಲ್ಲ ನಿವಾರಣೆ ಆಯ್ತು. ನಿಶ್ಚಿಂತೆಯಿಂದ ಮಲಗಿ ನಿದ್ದೆಮಾಡಿ ಮುಂಜಾನೆ ಮನೆಗೆ ಹೋದನು. ಕಥೆ ಹಾಡಿನ ಸುದ್ದಿ ತೆಗೆದು ಹೆಂಡತಿಗೆ ಮಾತಾಡಿಸಿ ನೋಡಿದನು. ಆದರೆ ಆಕೆಗೆ ಬರುತ್ತಿದ್ದ ಕಥೆ ಹಾಡು ಎರಡೂ ಮರೆತುಹೋದವೆಂದು ತಿಳಿಯಿತು.

 •