ಪುಟ:ಉಮರನ ಒಸಗೆ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಉಮರನ ಒಸಗೆ
೫೩

ತೆವಳಿ ಬದುಕುತ ಸಾಯುತಿರುವೆ ಕವಿದಿರುವ
ಗಗನವೆಂಬೀ ಬೋರಲಿರುವ ಬೋಗುಣಿಗೆ
ಕೈಯೆತ್ತಿ ವರಕೆಂದು ಮೊರೆಯಿಟ್ಟು ಫಲವೇನು ?
ನಿನ್ನ ನನ್ನ ವೊಲೆ ಅದು ಕೈಸಾಗದಿಹುದು. ೪೫

ಇದು ನಿಸದವೆನಗೀಗ : ಪರತತ್ವದೀಪದಲಿ
ನಲುಮೆಯಾನುಂ ಮೇರೆಗೆ, ಮುನಿಸಾನುಮರಿಗೆ ;
ದೇಗುಲದೊಳದನರಸಿ ಕಾಣದವುದಕಿಂತ
ಮಧುಗೃಹದೊಳದರಿಂಬ ಮೂಸುವುದೆ ಲೇಸು. ೪೬

ಹಳ್ಳಕೊಳ್ಳಗಳಿಂದ––ಕಳ್ಳು ಹೆಂಡಗಳಿಂದ––
ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ,
ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು
ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ ? ೪೭