ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 48 -

ಭಕ್ಷ್ಯಭೋಜ್ಯಗಳನ್ನು ಎಲ್ಲರಿಗೂ ಹಂಚಿದರು. ಬ್ರಾಹ್ಮಣರು ದಕ್ಷಿಣೆಗಳಿಂದ ಸಂತೃಪ್ತರಾಗಿ ಶಿವಾಜಿಯನ್ನು ಹರಸಿ ಹೋದರು. ನೂರಾರು ಬುಟ್ಟಿಗಳನ್ನು ಧರಿಸಿ ಅನಾಥರೂ ಆಶನಾರ್ಥಿಗಳೂ ಕೋಟೆಯ ಮಾರ್ಗವಾಗಿ ನಡೆದರು. ಇವರ ನಡುವಿನಲ್ಲಿ “ಭೀಮಕಾಯರಾದ ಇಬ್ಬರು ಮಾವಾಳಿಗಳು ಎರಡು ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಮನೆಯಿಂದ ಹೊರಟು, ಡಿಲ್ಲಿಯಿಂದಾಚೆಗೆ” ನುಸುಳಿ ಬಿಟ್ಟರು. ಮುಸಲ್ಮಾನ್ ಕಾವಲುಗಾರರು ತಮಗೆ ಸಿಕ್ಕಿದ ಖಾದ್ಯಪದಾರ್ಥಗಳ ವಿಚಾರದಲ್ಲಿ ಮಗ್ನರಾಗಿದ್ದುದರಿಂದ, ಬರುವವರ ಹೋಗುವವರ ಬುಟ್ಟಿಗಳನ್ನು ಪರೀಕ್ಷಿಸಿ ನೋಡದೆ, ತಲೆಯ ಮೇಲೆ ಬುಟ್ಟಿ ಹೊತ್ತವರನ್ನು ಹೊರಕ್ಕೆ ಹೋಗಬಿಟ್ಟರು. ಕತ್ತಲು ಬಲವಾಗುತ್ತ ಬಂದಿತು. ಕೋಟೆಯ ಹೊರಕ್ಕೆ ಹೋಗುವವರೆಲ್ಲರೂ ಅವಸರಗೊಂಡರು. ಪಹರೇಯವರು ರಾತ್ರಿಯಾಯಿತೆಂದು ಕೋಟೆಯ ಹೆಬ್ಬಾಗಿಲನ್ನು ಮುಚ್ಚಿ ಬಿಟ್ಟರು. ಇದುವರೆಗೆ ಅ೦ಬೋಧಿಯಂತೆ ಕಲಕಲಮಯವಾವ ಶಿಬಿರವು ನಿರ್ಜನವಾದ ಕಾಂತಾರದಂತೆ ನಿಶ್ಯಬ್ದವಾಯಿತು.

ಕೃಷ್ಣ ಪಕ್ಷದ ಕಾಳಿಮೆಯ ರಾತ್ರಿ. ಆಕಾಶದಿಂದ ಸುಳ್ಳಿನ ತಿಮಿರ ಧಾರೆಯಲ್ಲಿ ಡಿಲ್ಲಿ ನಗರವು ನನೆದು ಹೋಗಿ ಮಸುಕಾಗಿ ತೋರುತ್ತಲಿತ್ತು. ಬಾದಶಹನ ಅರಮನೆಯಿಂದ ಒಬ್ಬ ಯುವಕನು ಹೊರಕ್ಕೆ ಬಂದನು. ಪಹರೇಯವನು ಕೈಯಲ್ಲಿದ್ದ ಆಯುಧವನ್ನು ಎತ್ತಿ ತೋರಿಸಿ, ರಾಜದ್ವಾರವನ್ನು ತೆರೆದುಬಿಟ್ಟನು. ಯುವಕನು ರಾಜಮಾರ್ಗಕ್ಕೆ ಇಳಿದನು. ಅವನ ಹಿಂದುಗಡೆಯಲ್ಲಿಯೇ ರಾಜದ್ವಾರವು ಕಣಕಣ ಶಬ್ದದಿಂದ ಮುಚ್ಚಲ್ಪಟ್ಟಿತು. ಯುವಕನು ಬಾದಶಹನ ಜೇಷ್ಠ ಪುತ್ರನಾದ ಮುಆಜಮ್ ಆಗಿದ್ದನು. ಶಿವಾಜಿಯ ಪೂಜೆಯ ನೆವದಿಂದ ಹಂಚುತ್ತಲಿದ್ದ ಬುಟ್ಟಿಗಳನ್ನು ಪುನಃ ಪರೀಕ್ಷಿಸಬೇಕೆಂದು ಮುಆಜಮನು ಸಾಯಂಕಾಲದಲ್ಲಿಯೇ ಆಜ್ಞಪ್ತನಾಗಿದ್ದನು. ತಂದೆಯ ಈ ಆಜ್ಞೆಯನ್ನು ಶಿರಸಾವಹಿಸುವುದು ಯುವಕನಿಗೆ ಅಸಾಧ್ಯವಾಗಿತ್ತು. ಅದಕ್ಕೆ ಕಾರಣವೊಂದಿತ್ತು. ಸುರಾದೇವಿಯು ಈತನ ಶಿರಸ್ಸಿನಲ್ಲಿ ಆವಿರ್ಭವಿಸಿದ್ದುದರಿಂದ, ಪಿತೃವಿನ ಆಜ್ಞೆಗೆ ಅಲ್ಲಿ ಸ್ಥಳವಿರಲಿಲ್ಲ. ಬಾದಶಹನ ಆಜ್ಞೆಯನ್ನು ಮನಃಪೂರ್ವಕವಾಗಿ ಈ ಸತ್ಪುತ್ರನು ಪಾಲಿಸಿದ್ದರೆ, ಭಾರತವರ್ಷದ