ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಪಂಜೆ ಮಂಗೇಶರಾಯರ ಜೀವನಚರಿತ್ರೆ

ಇವರು ಕ್ರಿ. ಶ. ೧೮೭೪ರಲ್ಲಿ ಬಂಟವಾಳದಲ್ಲಿ ಜನ್ಮವೆತ್ತಿದರು. ಇವರು ಬಹಳ ಬಡ ಕುಟುಂಬದಲ್ಲಿ ಹುಟ್ಟಿದುದರಿಂದ ಬಾಲ್ಯದಿಂದಲೂ ಇವರಿಗೆ ಬಡಪತ್ತಿನ ಕಷ್ಟ ಸಂಕಷ್ಟಗಳ ತುಂಬಾ ಪರಿಚಯವಿತ್ತು. ೫ ಜನ ಅಣ್ಣತಮ್ಮಂದಿರಲ್ಲಿ ಇವರು ಎರಡನೆಯವರಾದರೂ ಇವರ ಬಡ ತಂದೆಯ ಬೇಗನೆ ಮಡಿದುದರಿಂದ ಇವರು ಬಿ. ಎ. ಪಾಸು ಮಾಡುವ ಮೊದಲೆ ಕುಟುಂಬಸಂರಕ್ಷಣೆ ಮತ್ತು ತಮ್ಮಂದಿರ ವಿದ್ಯಾಭ್ಯಾಸದ ಭಾರವು ಇವರ ಮೇಲೆ ಬಿತ್ತು. ಇವರ ಹಿರಿಯಣ್ಣನು ಬಿ. ಎ. ಪಾಸು ಮಾಡಿದೊಡನೆ ದಕ್ಷಿಣ ಮಹಾರಾಷ್ಟ್ರದಲ್ಲಿ ಕಲೆಕ್ಟರ ಅಥವಾ ಡಿಪ್ಯುಟಿ ಕಮ್ಮಿಶನರ ಕಚೇರಿಯಲ್ಲಿ ಗುಮಾಸ್ತರಾದರು. ಇವರ ಕಡಿಮೆ ಸಂಬಳದಿಂದ ಕುಟುಂಬ ಸಂರಕ್ಷಣೆ ಸಾಧ್ಯವಾಗಲಿಲ್ಲ. ಶ್ರೀ! ಮಂಗೇಶರಾಯರು ಹೀಗಾಗಿ ಗಣಿತವನ್ನು ತೆಗೆದುಕೊಂಡು ಬಿ. ಎ. ಪರೀಕ್ಷೆಗೆ ಮದ್ರಾಸಿಗೆ ಹೋಗಲಾರದೆ ಚರಿತ್ರೆಯನ್ನು ಐಚ್ಛಿಕವಾಗಿ ತೆಗೆದುಕೊಂಡು ಮಂಗಳೂರಿನ ಸೈಂಟ್ ಎಲೊಸಿಯಸ್ ಕೊಲೇಜಿನಲ್ಲಿ ಇಂಗ್ಲೀಷ ಮತ್ತು ಕನ್ನಡ ಶಾಲೆಗಳಲ್ಲಿ ಪಾಸುಮಾಡಿ ಮಂಗಳೂರಿನ ಗವರ್ನಮೆಂಟ ಕೊಲೇಜಿನಲ್ಲಿ ಬರೆ ೨೦ ರೂಪಾಯಿ ಅಲಜಿನ ಮೇಲೆ ಕನ್ನಡ ಪಂಡಿತರಾಗಿ ಸೇರಿದರು. ಕುಟುಂಬದ ಉದರ ನಿರ್ವಾಣಕ್ಕೆ ಇವರು ವಿದ್ಯಾರ್ಥಿಗಳಿಗೆ ಗಣಿತ ಇತ್ಯಾದಿಗಳನ್ನು ಖಾಸಗಿ ಕಳಿಸತೊಡಗಿದರು. ಅವರ ಆಗಿನ ನೂತನ ರೀತಿಗಳನ್ನು ಈಗಲೂ ಅವರ ವಿದ್ಯಾರ್ಥಿಗಳು ಸ್ಮರಿಸುತ್ತಾರೆ. ಹೀಗಾಗಿ ಸಾಧಾರಣವಾಗಿ ದಿನಕ್ಕೆ ೧೬ ತಾಸುಗಳಷ್ಟು ಕಾಲ ದುಡಿಯಬೇಕಾಯಿತು. ಇವರು ಕನ್ನಡವನ್ನು ಕಲಿಸತೊಡಗಿದೊಡನೆ ಹಳೆ ರೀತಿಯಲ್ಲಿ ಕಾವ್ಯ ಓದುವ ಕ್ರಮವು ಬಿದ್ದು ಹೋಗಿ ರಾಗಯುಕ್ತವಾಗಿ ಓದಲು ಪ್ರಾರಂಭವಾಗಿ ಕನ್ನಡ ಕಲಿಯುವವರಿಗೆ ಹೊಸಹುರುಪು ಬಂತು. ಅವರು ವಿದ್ಯಾರ್ಥಿಯಾಗಿರುವಾಗಲೂ ನಿಕಟ ಕವಿತ್ವವನ್ನು ಕುಳಿತಲ್ಲೆ ಮಾಡುತ್ತಿದ್ದುದರಿಂದ ಯಾವ ಕೂಟದಲ್ಲಿಯೂ ಮನೋರಂಜನೆಯನ್ನು ಮಾಡುತಿದ್ದರು. ಈ ಕಾಲದಲ್ಲಿ ಕೊಂಕಣಿಯಿಂದ ಒಂದೆರಡು ನಾಟಕಗಳ ಹಾಡುಗಳೂ ಮನರಂಜನೆ ಮಾಡುವುದನ್ನು ನೋಡಿ ನೂತನ ಕವಿತ್ವವನ್ನು ಬರೆಯಬೇಕೆಂಬ ಕುತೂಹಲವು ಇವರಲ್ಲಿ ಉಂಟಾಯಿತು. ಇವರ ಮೆದುಳಿನ ಸಾಮರ್ಥ್ಯವು ಬಹಳ ಚೆನ್ನಾಗಿದ್ದುದರಿಂದ ಇವರಿಗೆ ಓದಿದ ಯಾವ ಭಾಗವೂ ಫಕ್ಕನೆ ಬಾಯಿಪಾಠವಾಗುತಿತ್ತು. ಹೀಗಾಗಿ ಇವರು ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ತೊರವೆಯ ರಾಮಾಯಣ ಇತ್ಯಾದಿಗಳನ್ನು ಓದಿ ಹಲವಂಶವನ್ನು ಬಾಯಿಪಾತವಾಗಿ ಹೇಳುತ್ತಿದ್ದರು. ಇದರೊಂದಿಗೆ ಹಳೆಗನ್ನಡದ ಅಭ್ಯಾಸವೂ ಇವರಿಗೆ ಚೆನ್ನಾಗಿ ಆಯಿತು.