ವಿಷಯಕ್ಕೆ ಹೋಗು

ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧. ಸುಪ್ತ ಪ್ರತಿಭೆ

ದಿಕ್ಸೂಚಿ ಸೂಚಿಸಿದ ದಿಕ್ಕು
ಬಾನಾಚೆಯಿಂ ವಿಶ್ವಸ ತಾನಿಳಿದಿಳೆಗೆ
ನಾನೆನುವ ಚೇತನದಿ ರೂಪಗೊಂಡಿಹುದೋ ?
ನಾನೆನುವ ಕೇಂದ್ರದಿನೆ ಹೊರಟ ಸತ್ಯದ ಪರಿಧಿ
ಬಾನಾಚೆ ಹಬ್ಬಿಹುದೊ ? ಮಂಕುತಿಮ್ಮ

ಯೆಹೂದ್ಯ ವಣಿಕರ ಅಲೆಮಾರಿ ಕುಟುಂಬವೊಂದು ಜರ್ಮನಿ ರಾಷ್ಟ್ರದ ವುರ್ಟೆನ್‌ಬರ್ಗ್ ರಾಜ್ಯದ ಉಲ್ಸ್ಪಟ್ಟಣದಲ್ಲಿ ನೆಲಸಿತ್ತು. ಹರ್ಮನ್ ಐನ್‌ಸ್ಟೈನ್ (೧೮೪೭-೧೯೦೨) ಮನೆಯ ಹಿರಿಯ, ಪೌಲೀನ್ (೧೮೫೮-೧೯೨೦) ಇವರ ಹೆಂಡತಿ, ಜೇಕಬ್ (೧೮೫೦-೧೯೧೦) ತಮ್ಮ. ಐನ್‌ಸ್ಟೈನ್ ಸಹೋದರರು ವಿದ್ಯುದ್ರಾಸಾಯನಿಕ ಕಾರ್ಖಾನೆಯೊಂದರ ಮಾಲಿಕರು. ಇದರ ತಾಂತ್ರಿಕಾಂಶಗಳ ನಿರ್ವಹಣೆ ತಮ್ಮನ ಹೊಣೆ, ವ್ಯಾಪಾರ ವಹಿವಾಟುಗಳ ಉಸ್ತುವಾರಿ ಅಣ್ಣನದು. ಹರ್ಮನ್ ಅಂಥ ವ್ಯವಹಾರಕುಶಲಿ ಏನೂ ಆಗಿರಲಿಲ್ಲ. ಮುಗ್ಧತೆಯ ಕಡೆಗೇ ಒತ್ತು ಜಾಸ್ತಿ. ಹೀಗಾಗಿ ಕಾರ್ಖಾನೆ ಪದೇ ಪದೇ ನಷ್ಟಕ್ಕೆ ಈಡಾಗುತ್ತಿತ್ತು. ಆದರೆ ಇವರ ಜೀವನಶ್ರದ್ದೆಯಾಗಲಿ ಸಾಹಿತ್ಯಾಸಕ್ತಿಯಾಗಲಿ ಇದರಿಂದ ಬಾಧಿತವಾಗುತ್ತಿರಲಿಲ್ಲ.

ಪೌಲೀನ್ ವಿಶೇಷ ಸಾಮರ್ಥ್ಯವಂತ ಪ್ರಾಜ್ಞೆ, ಸಂಗೀತ, ಕಲೆ, ಸುಸಂಸ್ಕೃತ ಜೀವನ ಇವುಗಳಲ್ಲಿ ಅಪಾರ ಶ್ರದ್ಧೆ ಇರುವಾಕೆ. ಮನವೆಚ್ಚಕ್ಕೆ ಒದಗುತ್ತಿದ್ದ ರೊಕ್ಕ ಬಲು ಕಡಿಮೆ ಆಗಿದ್ದರೂ ಅಷ್ಟರಿಂದಲೇ ತೃಪ್ತಿ ತಳೆದು ಬದುಕಿಗೆ ಒಪ್ಪ ಓರಣ ತರುತ್ತಿದ್ದ ಕುಶಲಿ, ಮನೆಯಲ್ಲಿ ಹೆಚ್ಚು ಕಡಿಮೆ ಪ್ರತಿ ಸಂಜೆಯೂ ಸೇರುತ್ತಿದ್ದ ಸಂಗೀತಮೇಳದ ಕೇಂದ್ರ ವ್ಯಕ್ತಿ ಅಥವಾ ಪ್ರಧಾನಶ್ರುತಿ ಈಕೆಯೇ. ಜರ್ಮನ್‌ ಅಭಿಜಾತ (classical) ಸಂಗೀತಪ್ರಪಂಚದಲ್ಲಿ ವಿಹರಿಸುವುದು ಈ ಕಲಾಭಿಮಾನಿಗಳ ಪ್ರಿಯ ಹವ್ಯಾಸ.

ಜೇಕಬ್ ಒಬ್ಬ ಎಂಜಿನಿಯರ್. ಈ ವೃತ್ತಿಗೆಂದೇ ಶಿಕ್ಷಣ ಪಡೆದಾತ. ಅಮೂರ್ತ ಬೌದ್ಧಿಕ ಚಿಂತನೆಗಳಲ್ಲಿ ಹೆಚ್ಚಿನ ಒಲವು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ. ಇಂದಿನ ಪಟ್ಟಣಗಳಿಗೆ ಹೋಲಿಸಿದಾಗ ಅಂದಿನ ಉಲ್ಸ್ಪಟ್ಟಣ ವಿಸ್ತ್ರತ ಗ್ರಾಮದಂತಿತ್ತು. ಸರಳ ಶಾಂತಜೀವನ. ಐನ್‌ಸ್ಟೈನ್ ಕುಟುಂಬಕ್ಕೆ ಹೇಳಿಕೊಳ್ಳುವಂಥ ಸಿರಿವಂತಿಕೆ ಇರದಿದ್ದರೂ ಬದುಕಿನಲ್ಲಿ ನೆಮ್ಮದಿಗೆ ಏನೂ ಕೊರತೆ ಇರಲಿಲ್ಲ. ಕರ್ಮಠ ಯೆಹೂದ್ಯ ಸಂಪ್ರದಾಯವಾದಿಗಳಲ್ಲದ ಇವರು ಆ ಧರ್ಮದ ಸಾರವಾದ ಮಾನವೀಯತೆ, ಸಚ್ಚಾರಿತ್ರ್ಯ ಕರ್ತವ್ಯಪರಾಯಣತೆ, ಜೀವನ ಮೌಲ್ಯಗಳ ಬಗ್ಗೆ ವಿಶ್ವಾಸ ಇವನ್ನು ಹೀರಿ ಮೈಗೂಡಿಸಿಕೊಂಡು ಋಜುಜೀವನ ಬಾಳುತ್ತಿದ್ದರು.

ಹರ್ಮನ್ ಮತ್ತು ಪೌಲೀನ್ ಐನ್‌ಸ್ಟೈನ್ ದಂಪತಿಗಳ ಮೊದಲ ಕೂಸು ೧೮೭೯ ಮಾರ್ಚ್ ೧೪ರಂದು ಹುಟ್ಟಿತು. ಗಂಡು ಮಗು ಮನೆಗೆ ಹಬ್ಬ, ಮನಕ್ಕೆ ಮುದ ತಂದಿತ್ತು. ಮಗುವಿಗೆ ಆಲ್ಬರ್ಟ್ (ಐನ್‌ಸ್ಟೈನ್) ಎಂಬುದಾಗಿ ಹೆಸರಿಟ್ಟರು.

ಉಲ್ಸ್‌ ಪಟ್ಟಣದ ವ್ಯವಹಾರದಲ್ಲಿ ಯಶಸ್ಸು ಕಾಣದ ಈ ವಣಿಕ ಕುಟುಂಬ ಮರುವರ್ಷ ನೆರೆರಾಜ್ಯ ಬವೇರಿಯಕ್ಕೆ ವಲಸೆ ಹೋಗಿ ಮ್ಯೂನಿಕ್ ನಗರದಲ್ಲಿ ನೆಲಸಿತು. ಕಾರ್ಖಾನೆಯ ಪಕ್ಕದಲ್ಲಿಯೇ ವಾಸಕ್ಕಾಗಿ ಎರಡು ಮನೆಗಳನ್ನು ಹರ್ಮನ್ ಮತ್ತು ಜೇಕಬ್ ಕುಟುಂಬಗಳು ಬಾಡಿಗೆಗೆ