ಪುಟ:ಕಂಬನಿ-ಗೌರಮ್ಮ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲಿನ್ನಿಯ ಹಾಡು ಮುಗಿಯಿತು. ಭಾವ ಸಾಮ್ರಾಜ್ಯದಲ್ಲಿದ್ದ ನಾವೂ ಎಚ್ಚರಗೊಂಡೆವು. ಅರುಣಾದೇವಿಯು ಲಿನ್ನಿಯ ಕೈ ಹಿಡಿದು 'ಸೀತೆಯು ಬಾಯಿಂದ ನೀವೆ ಚೆನ್ನಾಗಿ ಹಾಡುವಿರೆಂದು ಕೇಳಿದ್ದರೂ ಇಷ್ಟೊಂದು ಚೆನ್ನಾಗಿ ಹಾಡುವಿರೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.' ಎಂದಳು. ಲಿನ್ನಿ 'ನಾನು ಹಾರ್ಮೋನಿಯಮ್ ಮಟ್ಟದೆ ಬಹಳ ದಿನಗಳಾದವು, ಬಾರಿಸುವ ಪಾಠ ತಪ್ಪಿಹೋಗಿದೆ' ಎಂದು ಹೇಳುತ್ತಾ ಎದ್ದು ನಿಂತಳು. ಲಿನ್ನಿಯ ಸರಳತೆ ಆರಿಣಾದೇವಿಯನ್ನು ಸಂಪೂರ್ಣವಾಗಿ ಒಲಿಸಿಕೊಂಡಿತು.

ಲಿನ್ನಿಯ ಹಾಡುವಿಕೆಯಿಂದಾಗಿ ಹೊತ್ತು ಹೋದುದೇ ತಿಳಿದಿರಲಿಲ್ಲ. ಗಡಿಯಾರವನ್ನು ನೋಡುವಾಗ ೭ ಗಂಟೆಯಾಗಿತ್ತು. ಕೌಸಲ್ಯಾನಂದನನು ಬಂದಿರಲಿಲ್ಲ. ಮರುದಿನ ಬರುವೆವೆಂದು ಹೇಳಿ ಹೊರಟೆವು. ಹೊರಜಗುಲಿಗೆ ಬರುವಾಗ ಅವರಿಬ್ಬರೂ ಕೂತಿದ್ದುದು ಕಾಣಿಸಿತು. ಕತ್ತಲಾಗಿದ್ದುದರಿಂದ ಮುಖ ಕಾಣಿಸಲಿಲ್ಲ. ಅರುಣ 'ಅಣ್ಣ, ಬಂದೆಷ್ಟು ಹೊತ್ತಾಯ್ತು?' ಎಂದಳು. ಆತ 'ಒಂದು ಗಂಟೆಯ ಹಿಂದೆಯೇ ಬಂದೆವು. ಒಳಗಿನಿಂದ ಹಾಡು ಕೇಳುತ್ತಿದ್ದುದರಿಂದ, ಒಳಗೆ ಹೋದರೆ ಅದು ನಿಂತು ಹೋಗಿ ಕೇಳುವ ಸುಯೋಗವು ತಪ್ಪಬಹುದೆಂದು ಇಲ್ಲೇ ಕೂತು ಕೇಳುತ್ತಿದ್ದೆವು.' ಎಂದ. ಅವನೊಡನೆ 'ಹಾಡಿದವರು ಇವರು ' ಎಂದು ಅರುಣಾದೇವಿ ಲಿನ್ನಿಯ ಕಡೆ ತಿರುಗಿ 'ಇವನು ನನ್ನ ಅಣ್ಣ, ಇವರು ಕೌಸಲ್ಯಾನಂದನ' ಎಂದಳು. ಅಷ್ಟರಲ್ಲಿ ಒಳಗಿನಿಂದ ಆಳು ದೀಸ ತಂದಿರಿಸಿದ. ಬೆಳಕಿನಲ್ಲಿ ನೋಡಿದೆವು. ...ಆಶ್ಚರ್ಯದ ಪರಮಾವಧಿ ! ಕನ್ನಡಿಗರ ಒಲವಿನ ಕೌಸಲ್ಯಾನಂದನ-ಲಿನ್ನಿಯ ಮನವನ್ನು ಕದ್ದ ರಾಮು! ತುಂಟ ರಾಮು !!

ಆಶ್ಚರ್ಯದಿಂದ ಆನಂದದಿಂದ ಲಿನ್ನಿ 'ರಾಮು' ಎಂದಳು. ನಾವೆಲ್ಲರಿರುವೆವೆಂಬುದನ್ನೇ ಮರೆತು ರಾಮು ಅವಳ ಕೈಗಳೆರಡನ್ನೂ ಹಿಡಿದು 'ನನ್ನ ವಸಂತ!' ಎಂದ.