ಪುಟ:ಕಂಬನಿ-ಗೌರಮ್ಮ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂರ್ತಿ ಅವಳಿಂದ ಪ್ರಭೆಯನ್ನು ಎತ್ತಿಕೊಂಡು ಆಡಿಸಿದ್ದನು. ಹಳೆಯ ಸ್ನೇಹಿತರಿಬ್ಬರು ಜೊತೆಯಾದರೆ ಮಾತಿಗೆ ಕೊನೆ ಮೊದಲಿದೆಯೇ? ಪ್ರಭೆ ಆ ದಿನ ತನ್ನ ಮನೆಗೆ ಹೋಗುವಾಗ ರಾತ್ರಿ ಎಂಟುಗಂಟೆ ಹೊಡೆದು ಹೋಗಿತ್ತು. ಮೂರ್ತಿಯೆ ಅವಳನ್ನು ಮನೆಗೆ ತಲುಪಿಸಿದ.

ಮರುದಿನ ಬೆಳಗ್ಗೆ ಮೂರ್ತಿ ಹಿತ್ತಲಲ್ಲಿದ್ದ ಸಂಪಿಗೆಯ ಮರ ಹತ್ತಿ ತಾಯಿಗಾಗಿ ಹೂ ಕೊಯ್ಯುತ್ತಿದ್ದ. ಮರವು ಬಹಳ ಎತ್ತರವಾಗಿತ್ತು. ಎತ್ತರದ ಕೊಂಬೆಯೊಂದರ ಮೇಲೆ ಕುಳಿತು ಮೂರ್ತಿ ಹೂ ಕೊಯ್ಯುತ್ತಿದ್ದಾಗ, ನೆರೆಮನೆಯ ನಲಿನಿ ಪಾತ್ರೆ ಬೆಳಗುತ್ತಾ ಕೊಳದ ಹತ್ತಿರ ಕುಳಿತಿದ್ದುದನ್ನು ಕಂಡ. ಜಗುಲಿಯ ಮೇಲೆ ಮುದ್ದು ಪ್ರಭೆ ಎಳೆಗರು ಒಂದಕ್ಕೆ ಪುಟ್ಟ ಕೈಯಿಂದ ರೊಟ್ಟಿ ಕೊಡುತ್ತಿದ್ದಳು. ಪ್ರಭೆಯ ಸುಂದರವಾದ ಮುಖವು, ಬಾಲಸೂರ್ಯನ ಹೊಂಬಿಸಿಲು ಬಿದ್ದು ಅರಲನುವಾದ ಕಮಲದಂತೆ ತೋರುತ್ತಿತ್ತು. ಅವಳ ಚಪಲ ಚಂಡಂ ನಯನಗಳು ಸಂತೋಷದ ಸುಳಿಗೆಯನ್ನು ಬೀರುತ್ತಿದ್ದವು. ಜಡೆ ಹೆಣೆದಿರಲಿಲ್ಲ. ಕೂದಲೆಲ್ಲಾ ಕೆದರಿ ಮುಖವನ್ನು ಸುತ್ತಿ ಮುತ್ತಿಡುತ್ತಿದ್ದಂತೆ ಕಾಣುತ್ತಿತ್ತು. ಮೂರ್ತಿ ಅವಳನ್ನು ನೋಡನೋಡುತ್ತ ಲೋಕವನ್ನೇ ಮರೆತುಬಿಟ್ಟ. ಅಷ್ಟು ಸುಂದರವಾಗಿತ್ತು ಆ ಮುದ್ದು ಮಗುವಿನ ನಿಷ್ಕ ಲಂಕವಾದ ರೂಪರಾಶಿ. ಪ್ರಭೆ ಮೂರ್ತಿಯನ್ನು ನೋಡಲಿಲ್ಲ. ರೊಟ್ಟಿ ಮುಗಿದೊಡನೆ ಇನ್ನೊಂದು ತರುವದಕ್ಕಾಗಿ ಒಳಗೆ ಹೋದಳು. ಆಗ ಮೂರ್ತಿಗೆ ಪ್ರಜ್ಞೆ ಬಂತು. 'ಮುದ್ದು ಪ್ರಭೆ ಎಷ್ಟು ಮುದ್ದಾಗಿದ್ದಾಳೆ! ನನಗಂತಹ ಒಬ್ಬಳು ತಂಗಿ ಇದ್ದಿದ್ದರೆ-' ಎಂದು ನಿಟ್ಟುಸಿರು ಬಿಟ್ಟು ಮೂರ್ತಿ ಹೂ ಕೊಯ್ಯತೊಡಗಿದ.

ಸ್ವಲ್ಪ ಹೊತ್ತಿನ ತರುವಾಯ ಮೂರ್ತಿ 'ಪ್ರಭೆ ಬಂದಳೇ' ಎಂದು ಆಕಡೆ ತಿರುಗಿ ನೋಡಿದ-ಬಂದಿರಲಿಲ್ಲ. ನಲಿನಿ ಮಾತ್ರ ಮೊದಲಿನಂತೆ ಪಾತ್ರೆ ಬೆಳಗುತ್ತಾ ಕೂತಿದ್ದಳು. ಅವಳ ಮುಖ ಕಾಣುತ್ತಿರಲಿಲ್ಲ. ಬೆನ್ನಿನ

೭೧