ಪುಟ:ಕಂಬನಿ-ಗೌರಮ್ಮ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು. ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸಂತೋಷವಾಗದಿದ್ದುದು ಆಶ್ಚರ್ಯವಲ್ಲ. ಆದರೆ ಅವಳ ಸಂತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ 'ಬಂದರಲ್ಲಾ' ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನು ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವದೆಂದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ.

ಮರುದಿನ ಇಂದು ಮುರಿದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತರ ತನ್ನ ಪ್ರಾಯದ ಹೆಂಗಸೊಬ್ಬಳನ್ನು ನೋಡಿದಳು. ಅವಳೂ ಇವಳನ್ನು ನೋಡಿದಳು. ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿಂಬ ಇಂದುವಿನ ಮೇರೆಯಲ್ಲೂ ಮೂಡಿತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸವು ಮುಂದುವರಿಯಲಿಲ್ಲ.

ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರೆಮನೆಯು ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು. ಯಾರೊಬ್ಬರ ಗುರುತು ಪರಿಚಯವೂ ಇಲ್ಲ. ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಆ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುಗೆ ತಿಳಿಯದು.