ಪುಟ:ಕಂಬನಿ-ಗೌರಮ್ಮ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಿವಾದುದು. ಅವನ ಅಕಸ್ಮಿಕ ಬರುವಿನಿಂದ ಅಪ್ರತಿಭಳಾದ ಅವಳು ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು. ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು.

ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖನೋಡುತ್ತಿದ್ದ ರತ್ನನನ್ನು ನೋಡಿ ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲಬಾಗಿಲಿಗಾಗಿ ತನ್ನ ಮನೆಗೆ ನಡೆದು ಬಿಟ್ಟಳು. ರತ್ನ ತನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಬೇಗ ಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪ್ರಶ್ನೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.

ಮತ್ತೆ ಒಂದೂವರೆ ಗಂಟೆಯ ತರುವಾಯ ವಾಣಿ ಇಂದುವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು. ವಾಣಿ 'ಸಿನಿಮಾಕ್ಕೆ ಬಾ' ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯ್ತು. ನಿಜಕ್ಕೂ ಅವಳಿಗೆ ತಲೆನೋವಿದ್ದುದೇನೋ ಹೌದು. ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದ್ದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದವಳು ಸಿನಿಮಾಕ್ಕೆಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರತರುತ್ತಿರಲಿಲ್ಲ.

ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿ ಹೋಗಬಹುದೆಂದು ರತ್ನ ವಾಣಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೇ ಹುಡುಗಾಟಿಕೆಯ ವಾಣಿ ಸುಮ್ಮನಾಗದೆ 'ಇಂದುವನ್ನೂ ಕರೆದುಕೊಂಡು ಹೋಗೋಣ' ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಬರಲು ಓಡಿದಳು. ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನ್ನು ನೋಡಿ ರತ್ನನಿಗೆ ಸಮಾಧಾನವಾಯ್ತು. ಆದರೆ ವಾಣಿ ಬಂದು 'ಇಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿ ಕೊಡಿ' ಎನ್ನುವಾಗ ಅವನಿಗೆ ವಾಣಿಯ ಹುಡುಗಾಟಿಕೆಗಾಗಿ ಕೋಪಬಂತು. 'ಸ್ವಲ್ಪ ತಲೆ ನೋವಾದ್ರೆ ಏನ್ಮಹಾ !

೧೩