ಪುಟ:ಕಂಬನಿ-ಗೌರಮ್ಮ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗಿ ಹದಿನೈದು ವರ್ಷ ಪ್ರಾಯದವಳು. ಆದರೆ ಬೆಳವಣಿಗೆಯನ್ನು ನೋಡಿದರೆ ಪ್ರಾಯ ಇನ್ನೂ ಹೆಚ್ಚಾಗಿದೆ ಎನ್ನುವಂತಿದ್ದಳು. ಇದ್ದಲಿನಂತ ಮೈವರ್ಣ. ಒಂದೆರಡು ತಿಂಗಳ ಹಿಂದೆ ಖಾಯಿಲೆ ಬಿದ್ದಿದ್ದಳಂತೆ-ತಲೆ ಕೂದಲೆಲ್ಲಾ ಉದುರಿ ಆಗ ತಾನೇ ಪುನಃ ಬರಲು ಪ್ರಾರಂಭವಾಗಿತ್ತಷ್ಟೇ. ಚಪ್ಪಟೆ ಮೂಗು, ಇನ್ನು ಕಣ್ಣು? ಯಾವಾಗಲೂ ರೆಪ್ಪೆಗಳ ಅಡಿಯಲ್ಲೇ ಅಡಗಿಕೊಂಡಿರುತ್ತಿದ್ದ ಅವಳ ಕಣ್ಣುಗಳನ್ನು ನಾನು ನೋಡಿರಲಿಲ್ಲ. ಆದರೂ ಅವುಗಳನ್ನು ಮುಚ್ಚಿಕೊಂಡಿದ್ದ ಉದ್ದವಾದ ರೆಪ್ಪೆಗಳನ್ನು ನೋಡಿ ಈ ಅವಲಕ್ಷಣದ ಮುಖಕ್ಕೆ ಇಷ್ಟೊಂದು ಸೊಗಸಾದ ರೆಪ್ಪೆಗಳು ಏಕೆ? ಎಂದೆನಿಸಿತ್ತು ನನಗೆ. ಕಿಟ್ಟಣ್ಣನ ಮಾವನ ಗುಮಾಸ್ತರ ಮಗಳವಳು. ಬಡತನವೂ ಆ ಕುರೂಪವೂ ಜೊತೆಯಾಗಿ ಅವಳಿಗೆ ವರ ಸಿಕ್ಕದಂತೆ ಮಾಡಿದ್ದವು. ಎಲ್ಲರಿಗೂ ಆವಳೆಂದರೆ ಅಷ್ಟಷ್ಟೆ. 'ಪಾರೂ ಅದು ಮಾಡೆ. ಇದು ಮಾಡೆ' ಎಂದು ಕೆಲಸ ಮಾಡಿಸುವವರೆ ಎಲ್ಲರೂ ಅವಳಿಗೂ ಕೆಲಸವೆಂದರೆ ಬೇಸರವಿದ್ದಂತೆ ತೋರಲಿಲ್ಲ. ನಾವು ಅಲ್ಲಿಗೆ ಹೋದಂದಿನಿಂದ ನನ್ನ ಹಿಂದೆ ಮುಂದೆ ತಿರುಗಹತ್ತಿದ್ದಳು. ರಸ್ತೆಯಲ್ಲಿ ಹೋಗುವ ನಾಯಿಯ ತಲೆಸವರಿದರೆ ಬೆನ್ನು ಹತ್ತುತ್ತದಲ್ಲ- ಹಾಗೆ ಅದಕ್ಕೆ ಕಾರಣವಿಷ್ಟೇ. ನಾವು ಹೋದ ದಿನ ಯಾರ ಪರಿಚಯವೂ ಇಲ್ಲದಿದ್ದ ನಾನು ಅವಳೊಡನೆ ಒಂದೆರಡು ಮಾತಾಡಿದ್ದೆ. ಸರಿ, ಒಳ್ಳೆಯ ಮಾತಾಗಳನ್ನು ಕೇಳುವುದೇ ಅಪರೂಪವಾಗಿದ್ದ ಅವಳನ್ನೊಲಿಸಿಕೊಳ್ಳಲ್ಲ ಅಷ್ಟೇ ಸಾಕಾಗಿತ್ತು. ನನಗೆ ಬೇಕಾದುದನ್ನು ಒಳಗಿನಿಂದ ತರುವುದು; ಹಿಂದೆ ಮುಂದೆ ತಿರುಗುವುದು; ನಾನು ಕೂತಲ್ಲಿ ಕೂಡುವುದು-ಹೀಗೆ ಒಂದಲ್ಲ, ನೂರು ವಿಧಗಳಲ್ಲಿ ಅವಳು ತನ್ನೊಲುಮೆಯನ್ನು ಪ್ರದರ್ಶಿಸುತ್ತಿದ್ದಳು. ಅವಳ ತಂದೆ-ಪಾಪ ಮುದುಕರು-ಅವಳನ್ನು ನೋಡಿ 'ಏನಮ್ಮಾ, ಪಾರೂ, ಅವರ ಜೊತೇಲೇ ಅವರೂರಿಗೆ ಹೊರಟುಹೋಗ್ತೀಯಾ ? ಎಂದು ತಮಾಷೆ ಮಾಡುವರು. ಆಗೊಮ್ಮೆ ಅವಳು ಹಲ್ಲುಕಿರಿದರೆ ಆ ಕರೀ ಮುಖದಲ್ಲಿ ಬಿಳಿಹಲ್ಲುಗಳ ಸಾಲು ಒಡೆದು ಕಾಣುವುದು ....

೪೧

6