ಪುಟ:ಕಂಬನಿ-ಗೌರಮ್ಮ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಣ್ಣುಗಳು, ಏಕಾಂತವಾಗಿರಬೇಕೆನ್ನುವ ಇಚ್ಛೆ ಇವನ್ನೆಲ್ಲ ನೋಡಿ ಆಶ್ಚರ್ಯ ದಿಂದ 'ಸೀತಾ, ಲಿನ್ನಿಗೆ ಏನಾಯ್ತು?' ಎಂದು ನನ್ನೊಡನೆ ಕೇಳುತ್ತಿದ್ದರು. ನಾನೇನೆನ್ನಲಿ? ದಿನಗಳು ಕಳೆದಂತೆ ಅನ್ನಿ ಮೊದಲಿನ ಆಟ, ತಮಾಷೆ, ಹಾಸ್ಯ ಎಲ್ಲವನ್ನೂ ಬಿಟ್ಟು ಯಾವಾಗಲೂ ಓದುತ್ತಲೇ ಇರುವಳು. ಅವಳೀಗ ಉಪಾಧ್ಯಾಯಿನಿಯರ ಮೆಚ್ಚಿಕೆಯ ಶಿಷ್ಯೆ. ಕ್ಲಾಸಿನಲ್ಲಿ ಮೊದಲನೆಯವಳು. ರಜೆ ಬರುವುದಕ್ಕೆ ಮೊದಲಿನ ಲಿನ್ನಿ ಸಂಪೂರ್ಣವಾಗಿ ವ್ಯತ್ಯಾಸಹೊಂದಿದ್ದಳು. ಮೊದಲು ದೀಪ ಆರಿಸಿ ಮಲಗಿದ ಮೇಲೆ ಲಿನ್ನಿ ಏನಾದರೂ ಮಾತನಾಡುತ್ತಿರುವುದು ವಾಡಿಕೆ. ಆದರೀಗ ರೂಮಿಗೆ ಬಂದೊಡನೆಯೇ ಸುಮ್ಮನೆ ಮಲಗಿ ಬಿಡುತ್ತಿದ್ದಳು. ನಿದ್ರೆ ಬರುತ್ತಿರಲಿಲ್ಲವೆಂದು ನನಗೆ ಗೊತ್ತಿದ್ದರೂ ಮಾತಾಡಿಸುವುದಕ್ಕೆ ಮಾತ್ರ ಸಾಹಸ ಉಂಟಾಗುತ್ತಿರಲಿಲ್ಲ. ನಾವು ಒಂದೇ ರೂಮಿನಲ್ಲಿದ್ದರೂ ಕೊನೆಕೊನೆಗೆ ದಿವಸಕ್ಕೆ ಬಂದು ಮಾತು ಆಡುವುದು ಸಹ ಬಹಳ ಅಪರೂಪವಾಗಿ ಹೋಯ್ತು.

ಒಂದು ದಿನ ಎಂದಿನಂತೆ ದೀಪ ಆರಿಸಿ ಮಲಗಿದ್ದೆವು. ಇಬ್ಬರಿಗೂ ನಿದ್ರೆ ಬಂದಿರಲಿಲ್ಲ. ಲಿನ್ನಿ 'ಸೀತಾ' ಎಂದಳು. ನಾವು ಮಾತಾಡಿಕೊಳ್ಳದೆ ಎಷ್ಟೋ ದಿನಗಳಾಗಿದ್ದವು. ಲಿನ್ನಿ 'ಸೀತಾ' ಎಂದು ಕೂಗಿದುದು ಕೇಳಿ ಹಿಂದಿನ ದಿನಗಳು, ನಮ್ಮಿಬ್ಬರೊಳಗಿನ ಸ್ನೇಹ ಎಲ್ಲಾ ಜ್ಞಾಪಕವಾಗಿ ಅಳು ಬಂದು ಬಿಟ್ಟಿತು. ತಡೆಯಲು ಯತ್ನಿಸಿದರೂ ಆಗಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದೆ. ಆದರೂ ತನ್ನೊಪ್ಪಿ ಕ್ಷಮೆ ಬೇಡಲು ಧೈರ್ಯವಾಗಲಿಲ್ಲ. ನಾನಳುವ ಶಬ್ದ ಕೇಳಿ ಲಿನ್ನಿ ಎದ್ದು ಬಂದು ನನ್ನ ಕೈಗಳನ್ನು ಹಿಡಿದು 'ಸೀತಾ, ನನ್ನ ಸೀತಾ, ಕ್ಷಮಿಸು' ಎಂದಳು.

'ಕ್ಷಮಿಸು'! ನಾನು ಅವಳ ಕಾಲು ಹಿಡಿದು ಹೇಳಬೇಕಾದ ಮಾತದು. ಸರಳ ಮನಸ್ಸಿನ ಲಿನ್ನಿ ನನ್ನೊಡನೆ ಯಾವ ಆಪರಾಧದ ಸಲುವಾಗಿ ಕ್ಷಮೆ ಬೇಡಬೇಕು ? ಅವಳು ಪುನಃ ಹೇಳತೊಡಗಿದಳು: 'ನಾನು ನಿನ್ನೊಡನೆ ಮೊದಲಿನಂತೆ ಬಾಯಿ ಬಡಿಯದಿದ್ದರೂ ಮೊದಲಿಗಿಂತಲೂ ಹೆಚ್ಚಿನ ಗೆಳತಿ ನಿನೀಗ ಸೀತಾ, ನಿನಗೆ ನನ್ನ ಗೊತ್ತಿರುವಂತೆ ನನ್ನ ತಾಯಿಗೂ

೫೫