ಪುಟ:ಕನ್ನಡದ ಬಾವುಟ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

vi

ಉಳಿಯುತ್ತಿತ್ತು. ತಮ್ಮ ಕವಿತೆಗಳನ್ನು ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟ ಕವಿಗಳಿಗೂ, ಚೆಲುವಾದ ಮುಖಚಿತ್ರವನ್ನು ಬರೆದುಕೊಟ್ಟ ಶ್ರೀ ಎಂ. ವಿ. ಸೀತಾರಾಮಯ್ಯನವರಿಗೂ, ಶ್ರೀಮನ್ ಮಹಾರಾಜರವರ ಮತ್ತು ಕನ್ನಡ ನಾಡಿನ ಚಿತ್ರದ ಪಡಿಯಚ್ಚುಗಳನ್ನು ಕೊಟ್ಟ ಮೈಸೂರು ವಿದ್ಯಾಶಾಖೆಯ ಅಧಿಕಾರಿಗಳಾದ ಶ್ರೀ ಇ. ಜಿ. ಮೆಕಿನ್ ಅವರಿಗೂ, ಬೇಲೂರು ಶಿಲಾಬಾಲಿಕೆಯ ಚಿತ್ರದ ಪಡಿಯಚ್ಚನ್ನು ಕೊಟ್ಟ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರಿಗೂ, ರನ್ನನ ಹೆಸರಿನ ಪಡಿಯಚ್ಚನ್ನು ಕೊಟ್ಟ ಶ್ರೀ ಜಿ. ಪಿ. ರಾಜರತ್ನಂ ಅವರಿಗೂ, ಮೈಸೂರು ಶಾಸನಗಳ ಸಂಕಲನದಿಂದ ಗಂಗರಾಜ ನೀತಿಮಾರ್ಗನ ಶಾಸನದ ಚಿತ್ರವನ್ನು ಉಪಯೋಗಿಸಿಕೊಳ್ಳಲು ಅನುಮತಿ ಕೊಟ್ಟ ಡಾಕ್ಟರ್ ಎಂ. ಎಚ್. ಕೃಷ್ಣ ಅವರಿಗೂ, ನಾನು ಕೊಟ್ಟ ತೊಂದರೆಗಳನ್ನೆಲ್ಲಾ ತಾಳಿಕೊಂಡು ಒಂದು ವಾರದಲ್ಲಿ ಅಂದವಾಗಿ ಅಚ್ಚು ಮಾಡಿಕೊಟ್ಟ, ಬೆಂಗಳೂರು ಪ್ರೆಸ್ಸಿನವರಿಗೂ, ಇನ್ನೂ ಹಲವು ಬಗೆಯಲ್ಲಿ ನನಗೆ ನೆರವಾದ ನನ್ನ ಇತರ ಮಿತ್ರರಿಗೂ ನನ್ನ ಉತ್ತಮ ವಂದನೆಗಳನ್ನು ಸಮರ್ಪಿಸುತ್ತೇನೆ.

ಕನ್ನಡದ ಬಾವುಟ ಎಂಬ ಕವಿತೆಯ ಅಚ್ಚಿನ ವಿಷಯದಲ್ಲಿ ಒಂದು ಮಾತು : ಕನ್ನಡ ಬರವಣಿಗೆಯಲ್ಲಿ ಈಗಿರುವ ಅಕ್ಷರ ಸಂಯೋಜನೆಯ ಕ್ರಮ ಹಲವು ದೃಷ್ಟಿಗಳಿಂದ, ಅದರಲ್ಲಿಯೂ ಮುದ್ರಣದೃಷ್ಟಿಯಿಂದ, ಬಳೆ ತೊಡಕಾದ್ದೆಂದೂ ಯಾವ ರೀತಿಯಲ್ಲಾದರೂ ಕೊಂಚಮಟ್ಟಿಗಾದರೂ ತೊಡಕು ಬಿಡಿಸಿ ಸರಳ ಮಾಡಬೇಕೆಂದೂ ಹಲವರು ಅಭಿಪ್ರಾಯಪಟ್ಟು, ಕರ್ಣಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಂದು ಸಮಿತಿಯನ್ನು ಏರ್ಪಡಿಸಿ ಆಗಬೇಕಾದ ಮಾರ್ಪಾಟುಗಳ ಪರ್ಯಾಲೋಚನೆಯನ್ನು ಆ ಸಮಿತಿಗೆ ವಹಿಸಿದರು. ಆ ಸಮಿತಿ ಚರ್ಚೆಗಳನ್ನು ನಡೆಸಿ ಕೆಲವು ತೀರ್ಮಾನಗಳಿಗೆ ಬಂತು. ಅದು ಸೂಚಿಸಿದ ಕೆಲವು ಮಾರ್ಪಾಟುಗಳನ್ನು ಇಲ್ಲಿ ಬಳಕೆಗೆ ತಂದಿದೆ. ಮುಖ್ಯವಾಗಿ ಮಾಡಿರುವ ಮಾರ್ಪಾಟುಗಳು ಮೂರು: (i) ದೀರ್ಘ ಚಿಹ್ನೆಯನ್ನು ಎಲ್ಲ ಕಡೆಯೂ ಒಂದೇ ರೀತಿ ಬರೆಯುವುದು- ಆ - - ಅ, ಬಾ ಒ, ಕೂ ಕು; (ii) ಒತ್ತಕ್ಷರವನ್ನು ಬಿಡಿಸಿ ಪಕ್ಕದಲ್ಲಿ ಬರೆಯುವುದು - ಕನ್ನಡ ಕನ್ನಡ, ಶ್ರೀ=ಶ್ರೀ ; (iii) ಎಲ್ಲಾ ಮಹಾಪ್ರಾಣ ಚಿಹ್ನೆಗಳನ್ನೂ ಅಲ್ಪಪ್ರಾಣ ಚಿಹ್ನೆ ಗಳ ಹೊಕ್ಕುಳು ಸೀಳಿಯೆ ಮಾಡಿಕೊಳ್ಳುವುದು - ಭ ಭ ; ಭ:- ಭ. ಈ ಸಣ್ಣ ಮಾರ್ಪಾಟುಗಳನ್ನು ತಾಳ್ಮೆಯಿಂದಲೂ ದೂರದೃಷ್ಟಿಯಿಂದಲೂ ನೋಡಿ ಎಲ್ಲರೂ ಒಪ್ಪಿಕೊಂಡು ಆದಷ್ಟು ಬೇಗ ಬಳಕೆಗೆ ತಂದರೆ ಎಳೆಯ ಮಕ್ಕಳ ಹೊರೆ, ಅಚ್ಚು ಕೂಟಗಳ ತೊಡಕು ಅರ್ಧಕ್ಕರ್ಧ ಕಡಮೆಯಾಗುವುದೆಂದು ನಂಬಿದ್ದೇನೆ.

ಶ್ರೀ

ಬೆಂಗಳೂರು ೧೭-೪-೧೯೩೮