ಸಮಾಜವಾದವೇ ಅಥವಾ ಬಂಡವಾಳವಾದವೇ?
ಅಧ್ಯಾಯ-7
ಒಂದನೇ ಮಹಾಯುದ್ಧ (1914-18) ವಿರಸಪೂರಿತ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಬಿಂಬವಾಯಿತು. ಲಾಭ ತರಬಲ್ಲ ಮಾರುಕಟ್ಟೆಗಳಿಗಾಗಿ ಪ್ರಮುಖ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾಗಳಿಗೂ ಮತ್ತು ಎದುರಾಳಿ ಜರ್ಮನಿಗೂ ಉಂಟಾದ ಯಾದವೀಕಲಹದಿಂದ ಉಂಟಾದ ಪರಿಣಾಮಗಳು ಅಷ್ಟಿಷ್ಟಲ್ಲ. ಯುದ್ಧದಿಂದ ನೊಂದ ರಷ್ಯಾದ ಜನಸಮುದಾಯ ಕ್ರಾಂತಿಕಾರಕ ಮಾರ್ಗವನ್ನು ಹಿಡಿಯಿತು; ಯುದ್ಧಕ್ಕೆ ಮತ್ತು ಶೋಷಣೆಗೆ ಕಾರಣಭೂತವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ದಮನಮಾಡಿತು ; ಸಮಾಜವಾದೀ ವ್ಯವಸ್ಥೆಯ ಉದಯವನ್ನು ಘೋಷಿಸಿತು.
ರಷ್ಯಾದಲ್ಲಿ ಉಂಟಾದ ಸಮಾಜವಾದೀ ಕ್ರಾಂತಿ, ಇತರ ಬಂಡವಾಳಶಾಹಿ ರಾಷ್ಟ್ರಗಳ ಕಾರ್ಮಿಕವರ್ಗಕ್ಕೆ ಕ್ರಾಂತಿಪಥವನ್ನು ತೋರಿಸಿತು. ಜನತೆಯ ಸಮ್ಮುಖದಲ್ಲಿ ಬ೦ಡವಾಳಶಾಹಿ ಸರ್ಕಾರ ಮತ್ತು ಬಂಡವಾಳಶಾಹಿ ವ್ಯವಸ್ಥೆ ಅಪರಾಧಿಗಳಾಗಿ ಕಂಡುಬಂದವು. ಕಾರ್ಮಿಕವರ್ಗದ ಮುಂದಾಳತ್ವದಲ್ಲಿ ಸಮಾಜವಾದೀ ಕ್ರಾಂತಿಯನ್ನು ನಡೆಸಲು ಜನಸಮುದಾಯ ಸಿದ್ಧವಾಯಿತು, ಈ ಸಂದರ್ಭದಲ್ಲಿ ಸುಧಾರಕರು
(1) ಕಾರ್ಲ್ ಕಾಟ್ಸ್ ಕೀ, ಬರ್ನ್ ಸ್ಟೈನ್, ಹಿಲ್ ಫರ್‌ಡಿಂಗ್, ಮ್ಯಾಕ್ ಡೊನಾಲ್ಡ್, ಹಿಂಡ್ ಮನ್, ಟುರಾಟ, ವಾನಡ್‌ರ್ ವೆಲ್ಡೇ, ಚರ್‌ನಾವ್, ಮಾರ್ ಟಾವ್, ಲಾಂಗ್ವೇ ಮತ್ತು ಇತರರು, ಇವರಲ್ಲಿ ಅನೇಕರು ತಾವೂ ಸಹ ಮಾರ್ಕ್ಸ್‌ವಾದಿಗಳೆಂದು ಕರೆದುಕೊಳ್ಳುತ್ತಿದ್ದರು. ಆದರೆ ಮಾರ್ಕ್ಸ್ ವಾದದ ತಿರುಳಾದ ಕಾರ್ಮಿಕರ ಕ್ರಾಂತಿಕಾರಿ ಚಳವಳಿಯನ್ನಾಗಲೀ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲಿಕ್ಕಾಗಿ ಕಾರ್ಮಿಕರು ರಾಜ್ಯಶಕ್ತಿಯನ್ನು ಉಪಯೋಗಿಸುವುದನ್ನಾಗಲೀ ಅನುಮೋದಿಸಲಿಲ್ಲ. ಪ್ರಜಾಸತ್ತೆ ಮಾರ್ಗವನ್ನು ಅನುಸರಿಸುವ ಸಮಾಜವಾದೀ ಪ್ರಜಾಸತ್ತಾತ್ಮಕರು (Social Democrats) ಎಂದು ಕರೆದುಕೊಂಡರು.
ಚೈತನ್ಯದಾಯಕ ರೀತಿಯಲ್ಲಿ ಮಾರ್ಕ್ಸ್ ವಾದವನ್ನು ಮಂಡಿಸಿದ ಮತ್ತು ಮಾರ್ಕ್ಸ್ ವಾದದ ಕ್ರಾಂತಿಕಾರೀ ಅಂಶಗಳನ್ನು ಎತ್ತಿ ಹಿಡಿದ ಲೆನಿನ್ನನು ಸಮಾಜ