ಪುಟ:ಕರ್ನಾಟಕ ಗತವೈಭವ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಕರ್ನಾಟಕ ಗತವೈಭವ


ವೆಂಕಟರಮಣ ದೇವರಿಗೆ ಸಮರ್ಪಿಸಲಿಕ್ಕೆ ಹೇಳಿದನಂತೆ. ಆಗ ತೆಲುಗು ಭಾಷೆಯಲ್ಲಿಯೇ ಈ 'ಕನ್ನಡರಾಯ'ನು ಏಕೆ ಗ್ರಂಥವನ್ನು ಬರೆಯಬೇಕೆಂಬುದಕ್ಕೆ ಆ ದೇವರು ಕೆಲವು ಕಾರಣಗಳನ್ನು ಹೇಳಿದನು. ಅವು ಯಾವುವೆಂದರೆ:- (೧) ಇದು ತೆಲುಗುದೇಶ, (೨) ನಾನು ತೆಲುಗು ದೇವರು, (೩) ತೆಲುಗು ಭಾಷೆ ಸಾಮಾನ್ಯ ಭಾಷೆಯಲ್ಲ, (೪) ಅನೇಕ ದೇಶಭಾಷೆಗಳನ್ನು ಬಲ್ಲವನಾದ ನಿನಗೆ ತೆಲುಗು ಭಾಷೆಯು ಲೇಸಾದ ಭಾಷೆಯೆಂಬುದು ಗೊತ್ತುಂಟು. ಆದರೆ, ಇಷ್ಟರಿಂದ ಆತನ ಮಾತೃ ಭಾಷೆಯು ತೆಲುಗು ಆಗಿತ್ತೆಂದು ಊಹಿಸಲಾಗದು, ತದ್ವಿರುದ್ದವಾಗಿ (೧) ಆ ತೆಲುಗು ದೇವರು ಆತನಿಗೆ 'ಕನ್ನಡರಾಯ' ನೆಂದು ಕರೆದಿರುವನು, (೨) ಕೃಷ್ಣರಾಯನು ತೆಲುಗು ಭಾಷೆಯವನೇ ಆಗಿದ್ದರೆ ಆತನಿಗೆ ತೆಲುಗು ಭಾಷೆಯಲ್ಲಿಯೇ ಗ್ರಂಥವನ್ನು ಬರೆಯಬೇಕೆಂದು ಬೇರೆ ಹೇಳುವ ಪ್ರಯೋಜನವಿರಲಿಲ್ಲ, (೩) ವಿಜಯನಗರ ರಾಜ್ಯವು ಬಹುತರವಾಗಿ ಕನ್ನಡ ರಾಜ್ಯವು, (೪) ರಾಜಧಾನಿಯಾದ ವಿಜಯನಗರ ಪಟ್ಟಣದ ಮುಖ್ಯ ಭಾಷೆ ಕನ್ನಡವು, (೫) ಕೃಷ್ಣರಾಯನಿಗೆ 'ಕನ್ನಡ ರಾಜ್ಯ ರಮಾ ರಮಣ” ಎಂದು ಬಿರುದಿತ್ತು. ಇವೇ ಮುಂತಾದ ಕಾರಣಗಳ ಮೂಲಕ ಆ ರಾಯನ ಮಾತೃಭಾಷೆಯು ಕನ್ನಡವೇ ಆಗಿತ್ತೆಂದು ಊಹಿಸಲಿಕ್ಕೆ ಬಲವಾದ ಆಸ್ಪದವುಂಟಾಗಿದೆ. ಇರಲಿ.
ವನ ಕಾಲಕ್ಕೆ ವಿಜಯನಗರದ ಸಾಮ್ರಾಜ್ಯವು ಪರಮಾವಧಿಯ ಘನತೆಗೇರಿತ್ತು. ಆದರೆ ನಮ್ಮ ಮಿಕ್ಕ ರಾಜ್ಯಗಳಂತೆ ಇದಕ್ಕೂ ಮುಂದೆ ಬಲಾಡ್ಯರಾದ ರಾಜರು ದೊರೆಯದುದರಿಂದ, ಇದು ಒಮ್ಮೆಲೆ ನೆಲಕ್ಕೆ ಕುಕ್ಕರಿಸಿತು. ಇರಲಿ, ಈ ಕೃಷ್ಣರಾಜನು ಅತ್ಯಂತ ಉದಾತ್ತ ಗುಣಗಳುಳ್ಳವನಾದುದರಿಂದ ತನ್ನ ದೇಶದಲ್ಲಿಯ ಮುಸಲ್ಮಾನ ಪ್ರಜೆಗಳು ತನಗೆ ಸಲಾಂ ಮಾಡಲಿಕ್ಕೆ ಹಿಂದುಮುಂದೆ ನೋಡಿಯಾರೆಂದು ಬಗೆದು, ತನ್ನಿದಿರಿಗೆ ಒಂದು ಕುರಾನವನ್ನು ಇಟ್ಟು, ಅದಕ್ಕೆ ಪೂಜ್ಯ ಭಾವವನ್ನು ತೋರಿಸಿದರೆ ಸಾಕೆಂದು ಹೇಳಿದ್ದನು, ಈತನ ದರಬಾರಿನಲ್ಲಿ ಅಷ್ಟ ದಿಗ್ಗಜಗಳೆಂಬ ಎಂಟು ಮಂದಿ ಮಹಾ ಪಂಡಿತರಿದ್ದರು. ತೆನ್ನಾಲ ರಾಮಕೃಷ್ಣನೂ ಅಪ್ಪಯ್ಯ ದೀಕ್ಷಿತರೂ ಅವರೊಳಗಿನವರೇ. ಈತನ ಕಾಲಕ್ಕೆ ಪರದೇಶಿಯ ಪ್ರವಾಸಿಕರು ವಿಜಯನಗರದ ವೈಭವವನ್ನು ಬಲು ಸುಂದರವಾಗಿ ವರ್ಣಿಸಿದ್ದಾರೆ. (ಮುಂದೆ ೧೨ನೆಯ ಪ್ರಕರಣದಲ್ಲಿ ನೋಡಿರಿ.)