ವಾಗಿ ಹರಿಯುವ ಝರಿಗಳಿಂದಲೂ, ಹಸರು ಬಳ್ಳಿಗಳಿಂದಲೂ ಲಿಂಬಿ, ದ್ರಾಕ್ಷ, ಕಿತ್ತಳೆ, ಅಂಜೀರು ಮುಂತಾದ ಫಲವೃಕ್ಷಗಳಿಂದಲೂ ಈ ಪಟ್ಟಣವು ಬಹು ಶೋಭಾಯಮಾನವಾಗಿದೆ. ಈ ಪಟ್ಟಣದಲ್ಲಿ ಜನಸಂಖ್ಯೆಯು ಅಪರಿಮಿತವಾಗಿದೆ. ವರ್ತಕರು ಮುತ್ತು-ರತ್ನ-ಹವಳ-ಮಾಣಕ-ವಜ್ರಗಳ ವ್ಯಾಪಾರ ವನ್ನು ಮಿತಿಮೀರಿ ಮಾಡುತ್ತಾರೆ, ಪ್ರತಿ ಶುಕ್ರವಾರಕ್ಕೊಮ್ಮೆ ದೊಡ್ಡ ಸಂತೆಯಾಗುತ್ತದೆ, ಆದರೆ ಪ್ರತಿಯೊಂದು ದಿನವೂ ಬೇರೆ ಬೇರೆ ಬೀದಿಗಳಲ್ಲಿ ಸಂತೆಗಳು ಕೂಡಿಯೇ ಕೂಡುತ್ತವೆ. ಈ ಪಟ್ಟಣದಲ್ಲಿ ಇಂಥ ಮಾಲು ಸಿಕ್ಕುವುದಿಲ್ಲ ವೆಂದಿಲ್ಲ, ಹಣ್ಣು ಹಂಪಲ ಕಾಯಿಪಲ್ಯಗಳ ರಾಶಿಯನ್ನು ನೋಡಿದರೆ ಕಣ್ಣು ತಿರುಗುತ್ತವೆ, ಅಂಗಡಿ ಮುಂತಾದವುಗಳಲ್ಲದೆ, ಜನರು ವಾಸಿಸುವ ಮನೆಗಳೇ ಈ ಪಟ್ಟಣದಲ್ಲಿ ಒಂದು ಲಕ್ಷವಿರುತ್ತವೆ. ಈ ರಾಯನು ೨೦ ಲಕ್ಷ ಸೈನ್ಯವನ್ನು ಕೂಡಿಸಬಲ್ಲನು. ಇವನ ಸೈನಿಕರನ್ನು ನಾನು ನೋಡಿದನು, ಆ ಸೈನಿಕರಲ್ಲಿ ಹೇಡಿಯೊಬ್ಬನೂ ನನಗೆ ಕಾಣಬರಲಿಲ್ಲ”.
ವಾಚಕರೇ, ದಕ್ಷಿಣೋತ್ತರ ೧೪ ಮೈಲು, ಪೂರ್ವ ಪಶ್ಚಿಮ ೧೦ ಮೈಲು ವಿಸ್ತಾರವುಳ್ಳ ಈ ಪಟ್ಟಣದ ವೈಭವವನ್ನು ಸಾಕಾದಷ್ಟು ಬಣ್ಣಿಸುವುದಂತು? ಅಲ್ಲಿಯ ಪ್ರತಿಯೊಂದು ಬೀದಿಯು ಮುಂಬಯಿಯಲ್ಲಿರುವ ಎಲ್ಲಕ್ಕೂ ದೊಡ್ಡ ಬೀದಿಗಿಂತ ಅಗಲವೂ ಸರಳವೂ ಚಂದವೂ ಆಗಿದೆ. ಪ್ರತಿಯೊಂದರ ಮಗ್ಗಲಿಗೆ ಒಂದು ಸುಂದರವಾದ ಸರೋವರವಿತ್ತು, ಈಗಲೂ ಆ ಹಾಳುಪಟ್ಟಣದ ಕುರುಹುಗಳನ್ನು ಕಾಣಬಹುದು, ಆದುದರಿಂದ ಅದನ್ನು ಪ್ರತಿಯೊಬ್ಬ ಕನ್ನಡಿಗನೂ ಸ್ವತಃ ನೋಡಿಯೇ ತೃಪ್ತಿಗೊಂಡು ಸ್ಪೂರ್ತಿಗೊಳ್ಳಬೇಕು. ಆ ಪಟ್ಟಣವನ್ನು ನೋಡದವನು ಕನ್ನಡಿಗನೇ ಅಲ್ಲವೆಂದು ಹೇಳಬಹುದು.
ಈ ಪಟ್ಟಣಗಳಲ್ಲದೆ ಇನ್ನೂ ಅನೇಕ ಪಟ್ಟಣಗಳ ವರ್ಣನೆಯನ್ನೂ ಕೊಡಬಹುದು, ಹಳೆಬೀಡು ಅಥವಾ ದ್ವಾರಸಮುದ್ರವು ೫ ಮೈಲು ಉದ್ದವಿತ್ತು ; ಅದೊಂದೇ ಪಟ್ಟಣದಲ್ಲಿ ೭೭೦ ಗುಡಿಗಳಿದ್ದುವಂತೆ. ಐಹೊಳೆಯು ವ್ಯಾಪಾರದ ಪಡಿಮೂಲಿಯಿತ್ತೆಂದು ವರ್ಣನೆಗಳಿವೆ. ಬಳ್ಳಿಗಾವಿ, ದೇವಗಿರಿ, ತೇರದಾಳ, ಪಟ್ಟದಕಲ್ಲ ಮುಂತಾದ ಅನೇಕ ಪಟ್ಟಣಗಳ ವರ್ಣನೆಯನ್ನು ನಾವು ಪುಸ್ತಕಗಳಲ್ಲಿ ಓದಬಹುದು, ಕನ್ನಡಿಗರೇ ಅದನ್ನು ಓದಿ ಆನಂದಪಡಿರಿ.
ಪುಟ:ಕರ್ನಾಟಕ ಗತವೈಭವ.djvu/೧೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೨ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು
೯೫