ಪುಟ:ಕರ್ನಾಟಕ ಗತವೈಭವ.djvu/೧೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೯೯
೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು

ತುಂಗನು ಸಾರ್ವಭೌಮ ಚಕ್ರವರ್ತಿಯಾಗಿದ್ದಾಗ ಅವನ ಮಾಂಡಲಿಕ ಅರಸರಾದ ಶಿಲಾಹಾರರು ಕೊರಿಸಿದರೆಂದು ಆ ಗವಿಗಳಲ್ಲಿ ಉಲ್ಲೇಖವಿದೆ. ಅಜಂತೆಯಲ್ಲಿಯ ಗುಡಿಗಳೂ ಅವುಗಳೊಳಗಿನ ಅತ್ಯಂತ ಸುಂದರವಾದ ಚಿತ್ರಗಳೂ ಬಹುತರವಾಗಿ ಬಾದಾಮಿಯ ಚಾಲುಕ್ಯರೊಳಗೆ ಅತ್ಯಂತ ಪ್ರಸಿದ್ಧನಾದ ೨ನೆಯ ಪುಲಿಕೇಶಿಯ ಕಾಲದಲ್ಲಿ ಹುಟ್ಟಿರುತ್ತವೆ. ಆ ಅಜಂತಯೊಳಗಿನ ನಮ್ಮ ಪುಲಿಕೇಶಿಯ ರಾಜಾಸ್ಥಾನದ ಚಿತ್ರವನ್ನೇ ನಾವು ಈ ಪುಸ್ತಕದಲ್ಲಿ ಕೊಟ್ಟಿರುವೆವು.
ಬಾದಾಮಿಯ ಪ್ರಸಿದ್ಧ ವೈಷ್ಣವ ಗವಿಯನ್ನು ೨ನೆಯ ಪುಲಿಕೇಶಿಯ ಕಕ್ಕನಾದ ಮಂಗಲೀಶನೆಂಬವನು ೫೦೦ನೆಯ ಶಕದಲ್ಲಿ ಕೂರಿಸಿದನು. ಈ ಗುಡಿಯೊಳಗಿನ ಚಿತ್ರಗಳು ಬಲು ಸುಂದರವಾಗಿವೆ. ಐಹೊಳೆಯಲ್ಲಿ ಚಿಕ್ಕ ದೊಡ್ಡ ಸುಂದರವಾದ ದೇವಾಲಯಗಳು ತುಂಬಿರುತ್ತವೆ. ಇದೇ ಐಹೊಳೆಯಲ್ಲಿಯ ಒಂದು ಜೈನ ಗುಡಿಯಲ್ಲಿ ಅತ್ಯಂತ ಪ್ರಸಿದ್ದವಾದ ದೊಡ್ಡ ಶಿಲಾ ಲಿಪಿಯು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ. ಇದರಿಂದ ದೊರೆತಷ್ಟು ಐತಿಹಾಸಿಕ ಮಾಹಿತಿಯು ಮಿಕ್ಕ ಯಾವ ಶಿಲಾಲಿಪಿಯಿಂದಲೂ ದೊರೆತಿಲ್ಲ. ೨ನೆಯ ಪುಲಿಕೇಶಿಯ ಮತ್ತು ಅವನ ಪೂರ್ವಜರ ವಿಷಯಕ್ಕೆ ಆ ಲಿಪಿಯು ಮಹತ್ವದ ಸಂಗತಿಯನ್ನು ವಿವರಿಸುತ್ತದೆ. ಪಟ್ಟದಕಲ್ಲೊಳಗೆ ಒಂದೇ ಕಡೆಗೆ ಸಾಲಾಗಿ ೮-೯ ಒಂದಕ್ಕಿಂತ ಒಂದು ಸುಂದರವಾದ ದೇವಾಲಯಗಳು ನೋಡತಕ್ಕವಾಗಿವೆ, ಅವುಗಳಲ್ಲೆಲ್ಲಾ ವಿರೂಪಾಕ್ಷ ದೇವಾಲಯವು ದೊಡ್ಡದು. ಇದನ್ನು ೨ನೆಯ ಪುಲಿಕೇಶಿಯ ವಂಶಜನಾದ ವಿಕ್ರಮಾದಿತ್ಯನೆಂಬವನ ಹೆಂಡತಿಯಾದ ಲೋಕಮಹಾದೇವಿಯು ೬೫೬ ನೆಯ ಶಕದಲ್ಲಿ ತನ್ನ ಗಂಡನು ಪಲ್ಲವರನ್ನು ಸೋಲಿಸಿದ್ದರ ಸೂಚನಾರ್ಥವಾಗಿ ಕಟ್ಟಿಸಿದಳು. ಈ ದೇವಾಲಯಗಳಲ್ಲದೆ, ಇಟಗಿ, ಲಕ್ಕುಂಡಿ, ಲಕ್ಷೇಶ್ವರ, ಹಾನಗಲ್ಲ, ಕುಕನೂರ ಮುಂತಾದ ಅನೇಕ ಸ್ಥಳಗಳಲ್ಲಿಯ ದೇವಾಲಯಗಳು ನೋಡತಕ್ಕವಾಗಿವೆ. ಈ ತರದ ಗುಡಿಗಳಿಗೆ ಚಾಲುಕ್ಯ ಪದ್ದತಿಯ ಕಟ್ಟಡಗಳೆಂದು ಕರೆಯುವ ವಾಡಿಕೆಯುಂಟು. ಈ ಪದ್ಧತಿಯ ಗುಡಿಗಳ ವಿಷಯವಾಗಿ ಪ್ರಸಿದ್ಧ ಶಿಲ್ಪಶಾಸ್ತ್ರಜ್ಞ ನಾದ ಡಾ| ಫರ್ಗ್ಯುಸನ್ ಎಂಬವನು ಹೇಳುವುದೇನೆಂದರೆ-

The area over which the style extended includes Mysore and all the Kanarese Country - its birth