ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು
೧೦೧

ಯೊಳಗೆ 'ಕನ್ನಡ' ವೆಂಬ ತಾಲುಕಿನಲ್ಲಿ ವೇರೂಳವೆಂಬ ಗ್ರಾಮದೊಳಗಿನ ಕೈಲಾಸವೆಂಬ ದೇವಾಲಯವು, ಒಂದು ದೊಡ್ಡ ಗುಡ್ಡವನ್ನೇ ಪೂರ್ಣವಾಗಿ ಕೊರೆದು ವಿಸ್ತೀರ್ಣವಾಗಿರುವ ಈ ಅಖಂಡವಾದ ಸುಂದರ ದೇವಾಲಯವನ್ನು ನಿರ್ಮಿಸಿರುತ್ತಾರೆ. ದೂರದಿಂದ ನೋಡಿದರೆ ಕಟ್ಟಿಸಿದ ಗುಡಿಯೆಂದೇ ಭಾಸವಾಗುತ್ತದೆ. ವೇರೂಳ ಗುಡ್ಡದಲ್ಲಿ ಸಾಲಾಗಿ ಸುಮಾರು ೩೪ ದೊಡ್ಡ ದೊಡ್ಡ ಕೊರೆದ ಗುಡಿಗಳುಂಟು, ಇಷ್ಟು ವಿಸ್ತೀರ್ಣವಾದ ಸಭಾಮಂಟಪಗಳನ್ನು ಕರ್ನಾಟಕದ ಶಿಲ್ಪಿಗರು ಹೇಗೆ ಕಡಿದರೆಂಬುದೇ ಅತ್ಯಂತ ಆಶ್ಚರ್ಯಜನಕವಾದ ಸಂಗತಿಯಾಗಿದೆ. ಕೊರೆದು ತೆಗೆದ ಒಳಗಿನ ಕಲ್ಲುಬಂಡೆಗಳು ಒಂದು ದೊಡ್ಡ ಗುಡ್ಡವೇ ಆಗಬಹುದು. ಅದೆಲ್ಲವನ್ನೂ ಹೇಗೆ ತೆಗೆದರೋ, ಅದು ಈಗ ಎಲ್ಲಿವೆಯೋ ಮುಂತಾದ ಸಂಗತಿಗಳು ಊಹಿಸಲಶಕ್ಯವಾಗಿವೆ. ಈ ೩೪ ಗುಡಿಗಳಲ್ಲಿ ಕೈಲಾಸಗುಡಿಯೇ ಅತ್ಯಂತ ಸುಂದರವಾದದ್ದೂ ಭವ್ಯವಾದದ್ದೂ ಆಗಿದೆ. ಇದನ್ನು ನಮ್ಮ ರಾಷ್ಟ್ರಕೂಟ ಅರಸನಾದ ಕೃಷ್ಣ (೭೫೩-೭೭೫) ನೆಂಬವನು ಕೂರಿಸಿದನು. ಬಡೋದೆಯಲ್ಲಿ ಸಿಕ್ಕಿದ ತಾಮ್ರ ಪಟಗಳಲ್ಲಿ ಈ ಗುಡಿಯ ವರ್ಣನೆಯು ದೊರೆಯುತ್ತದೆ. "ಈ ಗುಡಿಯು 'ಸ್ವಯಂಭೂ' ಗುಡಿಯೇ ಸರಿ; ಇದು ಮನುಷ್ಯ ಕೃತಿಯಾಗಿರಲಾರದು, ಮಾನವರಿಗೆ ಇಂಥ ಅದ್ಭುತ ಗುಡಿಯನ್ನು ಮಾಡುವ ಶಕ್ತಿಯೆಲ್ಲಿ ?” ಎಂದು ಅಲ್ಲಿ ವರ್ಣನೆಯುಂಟು. ವಿಶ್ವಕರ್ಮನೆಂಬ ಶಿಲ್ಪಿಗನು ಇದನ್ನು ಕೊರೆದನಂತೆ. ಈ ಗುಡಿಯನ್ನು ಕೊರೆದ ಮೇಲೆ ಅವನಿಗೆ ಅತ್ಯಂತ ಆನಂದವಾಗಿ ಇಂಥ ಗುಡಿಯನ್ನು ತಾನು ಹೇಗೆ ರಚಿಸಿದನೆಂಬುದು ತನಗೇ ತಿಳಿಯದಷ್ಟು ಆಶ್ಚರ್ಯವಾಯಿತಂತೆ!
ದೇವಾಲಯವನ್ನು ನೋಡಿದ ಕೂಡಲೆ, ಮನುಷ್ಯನ ಮನಸ್ಸು ಮೊದಲು ದಂಗು ಬಡೆದು, ಆಶ್ಚರ್ಯ ಆನಂದಾದಿ ಮನೋವೃತ್ತಿಗಳು ಅಲ್ಲಿ ಉಕ್ಕೇರಿ, ನೋಡುವವನು ನೋಡುವುದನ್ನು ಬಿಟ್ಟು ಸ್ವಸ್ಥವಾಗಿ ನಿಲ್ಲುತ್ತಾನೆ, ಮತ್ತು ನಿಂತಲ್ಲಿಯೇ ನಿಂತು, ಮೇಲೆ ಕೆಳಗೆ ಹಿಂದುಮುಂದೆ ನೋಡಿ “ಅಬಬ, ಇದು ಏನು ಅದ್ಭುತ ಕೃತಿ” ಎಂದು ಉದ್ಗಾರ ತೆಗೆಯುತ್ತಾನೆ. ಕೆಲವು ಹೊತ್ತಿನ ಮೇಲೆ ಅವನು ನೋಡಲಿಕ್ಕೆ ಮುಂದಕ್ಕೆ ಒಂದೊಂದೇ ಹೆಜ್ಜೆಯನ್ನಿಕ್ಕುತ್ತಾನೆ. ದೇವಾಲಯದ ಶೋಭೆಯನ್ನೂ ಭವ್ಯತೆಯನ್ನೂ ವಿಶಾಲತ್ವವನ್ನೂ ನೋಡಿ ಅವನ ಮನಸ್ಸಿನಲ್ಲಿ ಅದನ್ನು ಕಟ್ಟಿದ ಕುಶಲ ಶಿಲ್ಪಿಗರ ವಿಷಯದಲ್ಲಿ ಪೂಜ್ಯ ಬುದ್ಧಿಯೂ ಆದರವೂ