ಪುಟ:ಕರ್ನಾಟಕ ಗತವೈಭವ.djvu/೧೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೧೬
ಕರ್ನಾಟಕ ಗತವೈಭವ

ಕರ್ನಾಟಕದ ಪಟ್ಟಣಗಳ ಹೆಸರುಗಳನ್ನು ಹೇಳಿರುವನು. ಮೇಲ್ಕಂಡ ಹೆಸರುಗಳು ಕನ್ನಡವಾಗಿರುವುದರಿಂದ, ಕನ್ನಡ ಭಾಷೆಯು ಆಗಿನ ಕಾಲದಲ್ಲಿ ಒಳ್ಳೆ ಊರ್ಜಿತ ಸ್ಥಿತಿಯಲ್ಲಿ ಇರುವುದಾಗಿ ಸ್ಪಷ್ಟವಾಗುತ್ತದೆ. ೨ನೆಯ ಶತಮಾನದಲ್ಲಿ ಮಾಮುಲನಾರ ಎಂಬ ಕವಿಯಿಂದ ರಚಿತವಾದ 'ಅಹನಾನೂರ' ಎಂಬ ಗ್ರಂಥದಲ್ಲಿ ಮಹಿಷ ಮಂಡಲವೆಂಬುದಕ್ಕೆ ಪರ್ಯಾಯದಿಂದ 'ಎರಮೈನಾಡು' ಎಂಬ ಮೈಸೂರ ದೇಶದ ಹೆಸರು ಉಕ್ತವಾಗಿದೆ. ಅಲ್ಲದೆ, ಕೆಳಗಣ ಇಜಿಪ್ತ ದೇಶದಲ್ಲಿಯ "ಅಕ್ಸಿರಿಂಕಸ್" ಎಂಬ ಸ್ಥಳದಲ್ಲಿ ದೊರೆತ ಕ್ರಿ.ಶ.೨ನೆಯ ಶತಮಾನದಲ್ಲಿ ರಚಿತವಾದ ಒಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳುಳ್ಳ ವಾಕ್ಯವು ದೊರೆಯುತ್ತದೆ. ಆ ವಾಕ್ಯವು ಯಾವುದೆಂದರೆ-

"ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕಿ; ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೇರೆತ್ತುವೆನ್ "

ನೃಪತುಂಗನ ಕಾಲದಿಂದಲೂ ಕನ್ನಡದೊಳಗೆ ಹಳೆಗನ್ನಡ-ಹೊಸಗನ್ನಡವೆಂಬ ಭೇದವು ಇರುವುದಂತೂ ಸರಿಯಷ್ಟೆ! ಈ ಕಾಲಕ್ಕೆ ಕನ್ನಡ ಭಾಷೆಯು ಯಾವದೋ ಒಂದು ಹಳೆಯ ಅವಸ್ಥೆಯಿಂದ ಹೊಸದಾದ ಅವಸ್ಥೆಗೆ ಹೆಜ್ಜೆಯಿಕ್ಕಿತ್ತೆಂದು ಊಹಿಸಲಿಕ್ಕೆ ಅವಕಾಶವಾಗಿದೆ. ಹಳೆಗನ್ನಡವು ಹೋಗಿ ಹೊಸಗನ್ನಡವು ಹುಟ್ಟುವುದಕ್ಕೆ ಮುಂಚೆ ೭-೮ ಶತಮಾನಗಳು ಕಳೆದು ಹೋಗಿರಬೇಕು. ಸಾರಾಂಶ:- ಕನ್ನಡ ಭಾಷೆಯು ೨ನೆಯ ಶತಮಾನದಲ್ಲಿ ಒಳ್ಳೆ ಘನತಗೇರಿತ್ತೆಂದು ಹೇಳಬಹುದು. ಮುಂದೆ ೩ರಿಂದ ೫ನೆಯ ಶತಮಾನಗಳಲ್ಲಿ ಗಂಗ ಅರಸರ ಆಳಿಕೆಯಲ್ಲಿಯೂ, ಕದಂಬ ಅರಸರ ಕಾಲದಲ್ಲಿಯೂ ಬಾಳಿದ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯ ಪಾದ, ದುರ್ವಿನೀತ ಮುಂತಾದ ಮಹಾಮಹಾ ಪ್ರಾಸಾದಿಕ ಕವಿಗಳ ಗ್ರಂಥಗಳಿಂದಲೂ ಇದೇ ವ್ಯಕ್ತವಾಗುತ್ತದೆ.

ಚಾಲುಕ್ಯರ ಆಳಿಕೆಯಲ್ಲಿಯೂ ಕನ್ನಡ ನುಡಿಯ ಅಭಿವೃದ್ಧಿಯ ಲಕ್ಷಣಗಳು ದೃಗ್ಗೋಚರವಾಗುತ್ತವೆ. ಇವರ ಕಾಲಕ್ಕೆ ಶ್ರೀವರ್ಧದೇವ, ವಿಮಲ, ಉದಯ, ನಾಗಾರ್ಜುನ ಮುಂತಾದ ಕವೀಶ್ವರರು ಜನಿಸಿದರು. ಹಾನಗಲ್ಲ ತಾಲೂಕ ಆಡೂರಿನಲ್ಲಿಯ ಶಿಲಾಲಿಪಿಯ ಕನ್ನಡ ಅಕ್ಷರಗಳು ಅತಿಶಯ ಪ್ರಾಚೀನವಾದುವು. ಅದು ಸುಮಾರು ೫೬೬ನೆಯ ಇಸವಿಯ ಶಿಲಾಲಿಪಿಯು.