ಪುಟ:ಕರ್ನಾಟಕ ಗತವೈಭವ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಶ್ರೀ
ಕರ್ನಾಟಕ - ಗತ ವೈಭವ
ಪುನರ್ಮುದ್ರಣ

ಕಾ

ಲಮಹಿಮೆಯನ್ನಬೇಕೋ, ಅಥವಾ ಕರ್ನಾಟಕ ದೇವಿಯ ಗತವೈಭವದ ಪ್ರತಾಪ ವೆನ್ನಬೇಕೋ, ಯಾವತ್ತು ಭಾಗಗಳಲ್ಲಿಯ ಕನ್ನಡಿಗರು ಈ ಚಿಕ್ಕ ಪುಸ್ತಕವನ್ನು ಅತ್ಯಂತ ಅಭಿಮಾನದಿಂದ ಅಲ್ಲ - ಪ್ರೇಮದಿಂದ ಆದರಿಸಿರುವರೆಂಬುದನ್ನು ನೋಡಿ - ಲೇಖಕನು ತಾನು ಕೃತಾರ್ಥನಾದನೆಂದು ಭಾವಿಸುತ್ತಾನೆ. ಯಾಕಂದರೆ, ಮೊದಲನೆಯ ಆವೃತ್ತಿಯು ಹೊರಟ ನಾಲ್ಕೆಂಟು ತಿಂಗಳುಗಳಲ್ಲಿಯೇ, ಪುನರ್ಮುದ್ರಣದ ಸುಯೋಗವು ಪ್ರಾಪ್ತವಾಯಿತು. ಆದರೆ, ಅನೇಕ ಅಡತಡೆಗಳ ಮೂಲಕ, ಇಷ್ಟು ದಿವಸಗಳವರೆಗೆ ಅದನ್ನು ಮುದ್ರಿಸಲಿಕ್ಕೆ ವಿಲಂಬವಾಯಿತೆಂಬ ಬಗ್ಗೆ ನಾವು ಮೊದಲು ವಾಚಕರ ಕ್ಷಮೆಯನ್ನು ಬೇಡಿಕೊಳ್ಳುತ್ತೇವೆ.

ಆವೃತ್ತಿಯಲ್ಲಿ, ಹೊಸ ವಿಷಯಗಳನ್ನು ಹೆಚ್ಚಿಗೆ ಸೇರಿಸಬೇಕೆಂದರೆ, ಇತ್ತೀಚಿಗೆ ಸಂಶೋಧನದಲ್ಲಿ ನಾವು ಹೆಚ್ಚಾಗಿ ಮುಂದೆಜ್ಜೆಯನ್ನಿಟ್ಟಿಲ್ಲವಾದುದರಿಂದ, ಇದರಲ್ಲಿ ಹೆಚ್ಚಿನ ಸಂಗತಿಗಳೇನೂ ವಿಶೇಷವಾಗಿ ಕಾಣಬರುವದಿಲ್ಲ, ಕನ್ನಡ ನಾಡಿನ ಆಗ್ನೇಯ ಗಡಿಯನ್ನು ಗೊತ್ತು ಪಡಿಸಲಿಕ್ಕೆ ಒಂದು ತಮಿಳು ಗ್ರಂಥದ ಸಹಾಯವುಂಟಾದ ಸಂಗತಿಯನ್ನು ೧೭ನೆಯ ಪುಟದಲ್ಲಿಯೂ, ಜನರು ಈಗ ತಿಳಿಯುವಂತೆ ವಿಜಯನಗರದ ಕೃಷ್ಣ ದೇವರಾಯನು ತೆಲುಗು ಮನುಷ್ಯನಾಗಿರದೆ, ಕನ್ನಡ ಮನುಷ್ಯನಾಗಿರಬೇಕೆಂಬ ಬಗ್ಗೆ ಒಂದು ತೆಲುಗು ಗ್ರ೦ಥದಲ್ಲಿ ಹೇಗೆ ಆಧಾರ ದೊರೆಯುತ್ತದೆಂಬುದನ್ನು ೮೩ ಮತ್ತು ೮೪ ನೆಯ ಪುಟಗಳಲ್ಲಿಯೂ, ಹಿಂದಿನ ಕನ್ನಡಿಗರು ಪ್ರಸಂಗಾನುಸಾರವಾಗಿ ಬೇರೆ ದೇಶಗಳಿಗೆ ಹೋಗಿ ಅನ್ಯ ಭಾಷೆಯನ್ನು ಸ್ವೀಕರಿಸಿದರೂ ತಾವು ಕರ್ನಾಟಕರೆಂಬ ಅಭಿಮಾನವನ್ನು ಹೇಗೆ ಬಿಡಲಿಲ್ಲವೆಂಬುದಕ್ಕೆ ಒಬ್ಬ ತೆಲುಗು ಗ್ರಂಥಕಾರರ ಉದ್ಗಾರವನ್ನು ೧೨೨ನೆಯ ಪುಟದಲ್ಲಿಯೂ ಹೊಸದಾಗಿ ಸೇರಿಸಿರುವೆವು, ಹೊಸದಾಗಿ ಹಾಕಿದ ಮಹತ್ವದ ಸಂಗತಿಗಳೆಂದರೆ ಇವಿಷ್ಟೇ ಸರಿ.