ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರ್ನಾಟಕ ಗತವೈಭವ

ಟಿಕೆಯಲ್ಲಿ ನಾವೇಕೆ ಹಿಂದುಳಿದೇವು? ನಾವೇನು ಕಡಿಮೆಯವರೇ? ನಮ್ಮಿಂದ ರಾಜ್ಯೋನ್ನತಿಯಾಗದಂತಿದೆಯೇ ?” ಎಂದು ಮರಾಠರು ಮೈಯುಬ್ಬಿಸಿ ಮುಂದು ಮುಂದಕ್ಕೆ ಸರಿಯುತ್ತಿದ್ದಾರೆ. ಗುರ್ಜರರೂ ಸುಮ್ಮನೆ ಕುಳಿತಿಲ್ಲ. “ಭಾರತೀಯರಿಗೆಲ್ಲ ಅತ್ಯಂತ ಪೂಜ್ಯನಾದ ಶ್ರೀಕೃಷ್ಣನು ನಮ್ಮ ಭೂಮಿಯಲ್ಲಿಯೇ ವಾಸಿಸಿದ್ದನಲ್ಲವೇ? ಅವನ ದ್ವಾರಕೆಯು ಇಗೋ ಇದೇ ಅಲ್ಲವೇ? ಆ ಕೃಷ್ಣನ ವಂಶಜರಾದ ನಾವು ಕೈಲಾಗದವರೇ? ವನರಾಜ, ಮೂಲರಾಜ, ಸಿದ್ದರಾಜ ಇವರು ನಮ್ಮಲ್ಲಿಯೇ ಆಳಲಿಲ್ಲವೇ ಶ್ರೀ ವಲ್ಲಭಾಚಾರ್ಯರ ಅಭಿಮಾನವು ನಮಗೆ ಇರಬೇಡವೇ? ಗುರ್ಜರರಾದ ನಾವು ಲುಪ್ತವಾದ ನಮ್ಮ ಗೌರವವನ್ನು ಮರಳಿ ಪಡೆಯ ಲಾರೆವೇ ?” ಎಂದು ಹೇಳಿ ತಮ್ಮ ರಾಷ್ಟ್ರವನ್ನು ಉನ್ನತಿಯ ಮಾರ್ಗಕ್ಕೆ ಹಚ್ಚಿರುವರು. ಈ ಬಗೆಯಾಗಿ ಪ್ರತಿಯೊಂದು ಭಾಷೆಯವರೂ ತಮ್ಮ ತಮ್ಮ ಪ್ರಾಂತಗಳ ಇತಿಹಾಸವನ್ನು ಅಭಿಮಾನಪೂರ್ವಕವಾಗಿ ಅಭ್ಯಾಸಮಾಡಿ, ತಮ್ಮ ಜನರನ್ನು ಚೇತನ ಗೊಳಿಸುತ್ತಿರಲು, ನಮ್ಮ ಕರ್ನಾಟಕವಾದರೋ ! ಛೇ ! ಕರ್ನಾಟಕವೆಲ್ಲಿದೆ? ಕರ್ನಾಟಕವು ಜಗತ್ತಿನ ನಾಟ್ಯರಂಗದಿಂದ ಎಂದೋ ನಾಮಶೇಷವಾಗಿ ಹೋಗಿದೆ! ಇನ್ನು ಎಲ್ಲಿಯ ಕರ್ನಾಟಕ? ನಾಲ್ಕಾರು ಕಡೆಗೆ ಹರಿದು ಹಂಚಿ ಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವರಾರು? ಅಷ್ಟೊಂದು ಅಭಿಮಾನವು ನಮ್ಮಲ್ಲಿ ಎಲ್ಲುಂಟು? ಮಿಕ್ಕ ಕಡೆಯಲ್ಲೂ ನಮ್ಮ ಭಾಷಾ ಬಂಧುಗಳು ವಾಸಿಸುವರು; ಅವರ ರಕ್ತವೂ ನಮ್ಮ ರಕ್ತವೂ ಒಂದೇ; ನಮ್ಮ ಪೂರ್ವಜರೇ ಅವರ ಪೂರ್ವಜರು; ನಮ್ಮ ಅರಸರೂ, ಅವರ ಅರಸರೂ ಒಂದೇ; ನಮ್ಮ ಕವಿಗಳೇ ಅವರ ಕವಿಗಳು; ಎಂಬ ಸ್ವಾಭಿಮಾನವು ಕೂಡ ಯಾರಲ್ಲಿ ಇನ್ನೂ ಅಂಕುರಿಸಿಲ್ಲವೋ ಅವರಿಂದ ಯಾವ ಕಾರ್ಯವಾದೀತು? ಅಂಥವರು ಕೂಪಮಂಡೂಕ ನ್ಯಾಯದಿಂದ ಸಂಕುಚಿತ ವಿಚಾರಗಳುಳ್ಳವರಾದರೆ ಆಶ್ಚರ್ಯವೇನು? ಸಾರಾಂಶ:- ಪ್ರತಿಯೊಂದು ನಾಡಿನವರ ನಾಲಿಗೆಯ ಮೇಲೆ, ತಮ್ಮ ಪೂರ್ವಜರ ನಾಲ್ಕಾರು ಹೆಸರುಗಳಾದರೂ ಅಭಿಮಾನದಿಂದ ನಲಿದಾಡುತ್ತಿರಲು, ಕನ್ನಡಿಗನ ನಾಲಿಗೆಗೆ ಚಟ್ಟನೆ ಒಂದಾದರೂ ಹೆಸರು ಬರದಿರುವದು ತೀರ ಲಜ್ಜಾಸ್ಪದವಾದ ಸಂಗತಿಯಾಗಿದೆ! ಹಿಂದುಸ್ಥಾನದಲ್ಲಿಯ ಪ್ರತಿಯೊಂದು ಭಾಷೆಯವರೂ ತಮ್ಮ ಪೂರ್ವದ ಇತಿಹಾಸವನ್ನು ಉತ್ಸಾಹದಿಂದ ಸಂಶೋಧಿಸುತ್ತಿರಲು, ಕರ್ನಾಟಕವು ಮಾತ್ರ