ಪುಟ:ಕರ್ನಾಟಕ ಗತವೈಭವ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫ನೆಯ ಪ್ರಕರಣ - ಸಾಧನ-ಸಾಮಗ್ರಿ

೨೩


ಢಾಳವಾಗಿ ಮೂಡಿ, ಕರ್ನಾಟಕದ ಪ್ರಕಾಶಮಾನವಾದ ಚಿತ್ರವು ನನ್ನ ಕಣ್ಣಿನ ಮುಂದೆ ಎದ್ದು ಕಾಣಬೇಕಾದರೆ, ನಾವು ನಮ್ಮ ನಾಡಿನ ಇತಿಹಾಸವನ್ನು, ಅಭಿಮಾನ ಪೂರ್ವಕವಾದ ಪ್ರತಿಯೊಂದು ಸಂಗತಿಯೂ ಗೊತ್ತಾಗುವಂತೆ ಅಭ್ಯಾಸ ಮಾಡಬೇಕು. ಕರ್ನಾಟಕದ ನಿಜವಾದ ಮಾಹಾತ್ಮ್ಯವನ್ನೂ ಹೆಚ್ಚಳವನ್ನೂ ತಿಳಿಯಲಿಕ್ಕೆ ಅದರ ನಿಜವಾದ ಇತಿಹಾಸವೇ ದಾರಿಯು.
ದರೆ, ಕನ್ನಡಿಗರ ದುರದೃಷ್ಟವಶದಿಂದ, ಆ ಇತಿಹಾಸವನ್ನು ಹೊರಗೆಡವಲಿಕ್ಕೆ ಬೇಕಾಗುವ ಸಾಧನಗಳು ಈಗ ಸಾಕಾದಷ್ಟು ದೊರೆಯುವುದಿಲ್ಲ. ಒಂದು ವೇಳೆ ಎಲ್ಲಿಯೋ ಒಂದೆರಡು ದೊರೆತರೂ ಅವು ಹರಕು ಮುರಕುಗಳು. ಈ ತಪ್ಪು ಯಾರದು ? ಮೊದಲೇ, ಕರ್ನಾಟಕದ ವೈಭವವು ನಷ್ಟ ಹೊಂದಿ ಮುನ್ನೂರು ನಾನೂರು ವರ್ಷಗಳಾಗಿ ಹೋಗಿವೆ. ಮೇಲಾಗಿ ಪರಕೀಯ ಜನರು ಆಗಿನ ಕಾಲದ ತಮ್ಮ ಹಗೆಗಳ ಮೇಲಿನ ಡಂಕಿನಿಂದ ಅವರ ವೈಭವ ಚಿಹ್ನಗಳನ್ನು ತುಂಡರಿಸಿದ್ದಾರೆ. ಇಂಥ ಸ್ಥಿತಿಯಲ್ಲಿ ಕೂಡ, ಉಳಿದಷ್ಟು ಸಾಮಗ್ರಿಯನ್ನು ಕಲೆ ಹಾಕುವ ಬುದ್ದಿಯು ನಮ್ಮಲ್ಲಿದ್ದರೆ, ಇತಿಹಾಸಕ್ಕೆ ಎಷ್ಟೋ ಸಹಾಯವಾಗಬಹುದಾಗಿತ್ತು. ಆದರೆ ನಮ್ಮಲ್ಲಿ ಅಂಥ ಬುದ್ಧಿಯೂ ವಿಶೇಷವಾಗಿ ಹುಟ್ಟಲಿಲ್ಲ. ಅಂದ ಬಳಿಕ, ಈಗ ನಮ್ಮ ಹತ್ತಿರ ಆದ್ಯಂತವಾದ ಇತಿಹಾಸವನ್ನು ಬರೆಯು ವುದಕ್ಕೆ ಬೇಕಾಗುವಷ್ಟು ಸಾಧನಗಳಿಲ್ಲದ ತಪ್ಪು ನಮ್ಮದೇ ಅಲ್ಲವೆ? ಕನ್ನಡಿಗರೇ ! ಇನ್ನಾದರೂ ಏಳಿರಿ ! ಸಾಧ್ಯವಾದಷ್ಟು ಸಾಧನಗಳನ್ನು ಕಲೆ ಹಾಕಿದರೂ ಎಷ್ಟೋ ಕಾರ್ಯವಾಗುವಂತಿದೆ ! ಯಾಕಂದರೆ, ಈ ನಿಮ್ಮ ನಿರಭಿಮಾನತೆಯನ್ನು ನಿಮ್ಮ ಪೂರ್ವಜರು ಮೊದಲೇ ಕಂಡು ಹಿಡಿದುದರಿಂದಲೋ ಏನೋ ಅವರು ತಮ್ಮ ವೈಭವದ ಕುರುಹುಗಳನ್ನು ಶಾಶ್ವತವಾದ ಶಿಲಾಲಿಸಿ, ಕಟ್ಟಡ ಮುಂತಾದುವುಗಳಲ್ಲಿ ಇಟ್ಟು ಹೋಗಿದ್ದಾರೆ. ೧೦೦೦-೧೫೦೦ ವರ್ಷಗಳವರೆಗೆ ಆಳಿದ ಕರ್ನಾಟಕದಂಥ ವೈಭವಶಾಲಿಯಾದ ರಾಷ್ಟ್ರವೆಂದರೇನು! ಹಿಂದುಸ್ಥಾನದ ದೊಡ್ಡ ದೊಡ್ಡ ಇತಿಹಾಸ ಗ್ರಂಥಗಳಲ್ಲಿ ಕೂಡ ಅದರ ಚರಿತ್ರದ ಪಾಲಿಗೆ ಹತ್ತೆಂಟು ಪುಟಗಳೇ ಬರುವುದೆಂದರೇನು! ಕನ್ನಡಿಗರೇ, ಇದು ಅಪಮಾನಕಾರಕವಲ್ಲವೆ? ಈ ಕುಂದಕವನ್ನು ಹೋಗಲಾಡಿಸುವುದು ನಿಮ್ಮ ಕರ್ತವ್ಯವಲ್ಲವೆ?