ಪುಟ:ಕರ್ನಾಟಕ ಗತವೈಭವ.djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಕರ್ನಾಟಕ ಗತವೈಭವ

ಸಂಗತಿಗಳನ್ನು ಇಲ್ಲಿ ಸಂಕ್ಷೇಪವಾಗಿ ಹೇಳಿಟ್ಟರೆ ಹೊಸದಾಗಿ ದೊರೆತ ಸಾಧನಗಳ ಪ್ರಯೋಜನ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅರಸರ ಆಳಿಕೆಗಳ ಕ್ರಮವಾದ ಇತಿಹಾಸವನ್ನು ಹೇಳುವುದೇ ಈಗ ನಡೆದುಬಂದ ಪದ್ಧತಿ. ಅದಕ್ಕನುಸಾರವಾಗಿ, ಸಾಮಾನ್ಯ ವಾಚಕರು ಕೂಡ ನೆನಪಿನಲ್ಲಿಡಬಹುದಾದ ಮತ್ತು ಪ್ರತಿಯೊಬ್ಬ ಕನ್ನಡಿಗನೂ ಅವಶ್ಯವಾಗಿ ಕಲಿಯತಕ್ಕ ಸಂಗತಿಗಳನ್ನಷ್ಟೇ ಹೇಳಿ, ಅತಿ ಪ್ರಾಚೀನಕಾಲದಿಂದ ಕೊನೆಯವರೆಗಿನ ಇತಿಹಾಸ ಕ್ಷೇತ್ರದಲ್ಲಿ ನಮ್ಮ ವಾಚಕರನ್ನು 'ಮೊಟಾರ' ವೇಗದಿಂದ ಅಡ್ಡಾಡಿಸಿಕೊಂಡು ಬರುತ್ತೇವೆ.
ರಾಮಾಯಣಕಾಲದಲ್ಲಿ ನರ್ಮದೆಯ ದಕ್ಷಿಣಕ್ಕೆ ದಂಡಕಾರಣ್ಯವೆಂಬ ಮಹಾ ಕಾಂತಾರವಿತ್ತು, ಕರ್ನಾಟಕದಲ್ಲಿ ಆಗ ಬೆಳೆದ ಅಡವಿಗೆ ಮತಂಗವನವೆಂದು ಹೆಸರು, ಅದರಲ್ಲಿ, ಮತಂಗ, ಗಾಲವ, ಜಮದಗ್ನಿ ಮುಂತಾದ ಖುಷಿಗಳು ತಪಶ್ಚರ್ಯೆ ಮಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೂಡ ಸುಗ್ರೀವನ ರಾಜಧಾನಿಯಾದ ಕಿಷ್ಕಿಂಧಾ ಪಟ್ಟಣವು ಭರಭರಾಟಿಯಲ್ಲಿ ಇದ್ದೇ ಇತ್ತು, ಈಗಿನ ಹಂಪ ಅಥವಾ ಪಂಪಾಪಟ್ಟಣವೇ ಆ ಕಿಷ್ಕಿಂಧೆ. ಈಗಿನಂತೆ ಆಗಲೂ ಕೂಡ ಅದೊಂದು ಪವಿತ್ರ ಕ್ಷೇತ್ರವೆಂದೆಣಿಸಲ್ಪಡುತ್ತಿತ್ತು, ವಿಜಯನಗರವೆಂದರೂ ಇದೇ !
ಸಾರಾಂಶ:- ಈ ಪಟ್ಟಣವು ಕರ್ನಾಟಕದಲ್ಲಿ ಅತಿ ಪ್ರಾಚೀನಕಾಲದಿಂದ ಪ್ರಸಿದ್ದವು. ಕರ್ನಾಟಕ ವೈಭವದ ಸಮಾಧಿಯೂ ಇಲ್ಲಿಯೇ ಆಯಿತು. ಯಾಕೆಂದರೆ, ಕನ್ನಡನಾಡಿನ ಕೊನೆಯ ಅರಸರಾದ ವಿಜಯನಗರದ ರಾಜರು ಇದೇ ಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳಿದರು, ೧೫೬೫ರಲ್ಲಿ ತಾಳಿ ಕೋಟಿಕಾಳಗದಲ್ಲಿ ಅವರು ಸೋತುದರಿಂದ ಅವರ ವೈಭವವೆಲ್ಲವೂ ಮಣ್ಣು ಪಾಲಾಯಿತು. ಇರಲಿ, ಗೋಕರ್ಣದ ಮಹಾಬಳೇಶ್ವರಲಿಂಗವು ರಾವಣನಿಂದ ಸ್ಥಾಪಿತವಾಯಿತಂಬ ಕಥೆಯುಂಟು, ಈ ದೇವಸ್ಥಾನದ ಉಲ್ಲೇಖವು ರಾಮಾಯಣ ಕಾಲದಲ್ಲಿಯೂ ಇರುತ್ತದೆ. ಇದು ರಾಮಾಯಣ ಕಾಲದ ಸ್ಥಿತಿಯಾಯಿತು.
ಹಾಭಾರತ ಕಾಲದೊಳಗೆ ಕರ್ನಾಟಕದೊಳಗೆ ಹಲಕೆಲವು ರಾಜ್ಯಗಳು ನೆಲೆಗೊಂಡಿದ್ದುವು. ಕರವೀರಪರ (ಕೊಲ್ಲಾಪುರ)ದಲ್ಲಿ ಶೃಗಾಲವಾಸುದೇವನೆಂಬ ಆರಸನು ಆಳುತ್ತಿದ್ದನು. ಕೃಷ್ಣನು ಅವನನ್ನು ಕೊಂದು ಅವನ ರಾಜ್ಯಕ್ಕೆ ಸೇರಿದ ಗೋಮಂತಕ ಪ್ರಾಂತವನ್ನು ತನ್ನ ಕೈವಶಮಾಡಿಕೊಂಡನು. ಮತ್ಸ್ಯಪುರದಲ್ಲಿ